ನವದೆಹಲಿ: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಶೈಕ್ಷಣಿಕ ಅರ್ಹತೆ ಆಧಾರಿತವಾಗಿದ್ದು, ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ ಎಂದು ನಿಗಮ ತಿಳಿಸಿದೆ. ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಅವಧಿಯಲ್ಲಿ ಉದ್ಯಮ ಅನುಭವ ಒದಗಿಸಲಾಗುತ್ತದೆ.
ಅರ್ಹತೆ: ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್ ಪದವಿ ಅಗತ್ಯ. 2023ರ ಏಪ್ರಿಲ್ 1ರಂದು ಅಥವಾ ನಂತರ ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಹರು. ಸಾಮಾನ್ಯ, ಒಬಿಸಿ (ಎನ್‌ಸಿಎಲ್), ಇಡಬ್ಲ್ಯೂಎಸ್ ವರ್ಗಗಳಿಗೆ ಶೇ.60 ಹಾಗೂ ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶೇ.50 ಅಂಕ ಕಡ್ಡಾಯ. ವಯೋಮಿತಿ 18ರಿಂದ 25 ವರ್ಷ; ಮೀಸಲು ವರ್ಗಗಳಿಗೆ ಸಡಿಲಿಕೆ ಅನ್ವಯಿಸುತ್ತದೆ.
ಸ್ಟೈಫಂಡ್: ತಿಂಗಳಿಗೆ ₹25,000 (HPCL ₹20,500 + ಕೇಂದ್ರದ DBT ₹4,500).
ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯಲಿದ್ದು, 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ.
ಅರ್ಜಿ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್; ಯಾವುದೇ ಶುಲ್ಕವಿಲ್ಲ. HPCL ಅಧಿಕೃತ ವೆಬ್‌ಸೈಟ್ hindustanpetroleum.com ಅಥವಾ jobs.hpcl.co.in ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲು NATS 2.0 ಪೋರ್ಟಲ್‌ನಲ್ಲಿ ನೋಂದಣಿ ಅಗತ್ಯ. ಫೆಬ್ರವರಿ 16ರಿಂದ ಅರ್ಜಿ ಸ್ವೀಕಾರ ಪ್ರಾರಂಭವಾಗಿದ್ದು, ಮಾರ್ಚ್ 2 ಅಂತಿಮ ದಿನಾಂಕವಾಗಿದೆ.





















































