ಬೆಂಗಳೂರು: ಚುನಾವಣೆಗೆ ತಯಾರಿಯಲ್ಲಿರುವ ಪ್ರದೇಶ ಕಾಂಗ್ರೆಸ್ ಪಕ್ಷ ಇದೀಗ ಸಾಮೂಹಿಕ ನಾಯಕತ್ವದ ಸೂತ್ರಕ್ಕೆ ಮೊರೆಹೋಗಿದೆ. ಈ ಸಂಬಂಧ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದ್ದು, ಇದರಲ್ಲಿ ಹಲವು ವಿಚಾರವಾಗಿ ತೀರ್ಮಾನ ಮಾಡಲಾಗಿದೆ. ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ ಮೊದಲ ವಾರದಲ್ಲಿ ಎಲ್ಲ ಮುಖಂಡರೂ ಸೇರಿ 20 ಜಿಲ್ಲೆಗಳಲ್ಲಿ ಒಟ್ಟಾಗಿ ಬಸ್ ಯಾತ್ರೆ ಮಾಡುವ ಮೂಲಕ ರಾಜ್ಯದ 150 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಆಮೂಲಕ ಪಕ್ಷ ಸಂಘಟನೆ, ಸರ್ಕಾರದ ವೈಫಲ್ಯ, 40% ಕಮಿಷನ್, ಬೆಲೆಏರಿಕೆ, ಮತದಾರರ ಮಾಹಿತಿ ಕಳವು, ನಿರುದ್ಯೋಗ ಸೇರಿದಂತೆ ಹಲವು ವಿಚಾರವಾಗಿ ಜನರಿಗೆ ಮಾಹಿತಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುವಂತೆ ಮನವಿ ಮಾಡಲಾಗುವುದು ಎಂದರು.
ಈ ತಿಂಗಳು 30ರಂದು ಬಿಜಾಪುರದಲ್ಲಿ ಕೃಷ್ಣಾ ಯೋಜನೆ ವಿಚಾರವಾಗಿ ಹಾಗೂ ಜ.2ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ವಿಚಾರವಾಗಿ ಹಾಗೂ ಜ.8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಒದಗಿಸಿದ ಅವರು, ಜನವರಿ ಮೊದಲವಾರ ನಡೆಯಲಿರುವ ಬಸ್ ಯಾತ್ರೆ ದಿನಾಂಕ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಮುಂದಿನ 100 ದಿನಗಳಲ್ಲಿ ಪಕ್ಷ ಸಂಘಟನೆ ಜತೆಗೆ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಅರಿವು ಮೂಡಿಸುತ್ತೇವೆ ಎಂದರು.
ಇನ್ನು ಇಂದು ಅಲ್ಪಸಂಖ್ಯಾತರ ಸಭೆ ಮಾಡಿದ್ದು, ಈ ಸಭೆಯಲ್ಲಿ 55 ನಾಯಕರು ಭಾಗವಹಿಸಿದ್ದರು. ಮಾಜಿ ಸಚಿವರು, ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥರು, ಮಾಜಿ ಸಂಸದರು ಸೇರಿದಂತೆ ಎಲ್ಲರೂ ಸೇರಿ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ವಿಚಾರವಾಗಿ ಹೇಗೆ ಕೆಲಸ ಮಾಡಲಾಗುವುದು ಎಂದು ಚರ್ಚಿಸಲಾಯಿತು. ಇಂದಿನ ಸಭೆಯಲ್ಲಿ ಅಲ್ಪಸಂಖ್ಯಾತರ ಮತ ಡಿಲೀಟ್ ಮಾಡಿರುವುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಮತ ತೆಗೆದುಹಾಕುವ ಮೂಲಕ ಸರ್ಕಾರ ಷಡ್ಯಂತ್ರ ರೂಪಿಸಿದೆ. ಇದನ್ನು ಮುಂದಿನ ದಿನಗಳಲ್ಲಿ ಹೇಗೆ ಸರಿಪಡಿಸಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ಸಲೀಂ ಅಹ್ಮದ್ ತಿಳಿಸಿದರು.
ಬಿಜೆಪಿ ಸೋಲಿನ ಭೀತಿಯಿಂದ ಈ ಕೆಲಸ ಮಾಡುತ್ತಿದ್ದಾರೆ. ಚಿಲುಮೆ ಸಂಸ್ಥೆ ವಿರುದ್ಧ ನಾವು ನೀಡಿದ ದೂರು ಸಾಬೀತಾಗಿದೆ. ಇದೇ ಮಾದರಿಯಲ್ಲಿ ಇತರ ಜಿಲ್ಲೆಗಳಲ್ಲಿ ಮತದಾರರ ಮಾಹಿತಿ ಕಳವು ಮಾಡಲಾಗಿದೆ ಎಂದು ದೂರಿದ ಅವರು, ಇನ್ನು ಜನವರಿ ತಿಂಗಳಲ್ಲಿ 5 ವಲಯಗಳ ಸಭೆ ಮಾಡಲಾಗುವುದು. ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಸಮಾವೇಶವನ್ನು ಒಟ್ಟಾಗಿ ಮಾಡುತ್ತೇವೆ ಎಂದು ತಿಳಿಸಿದರು.
ಪಕ್ಷದ ಟಿಕೆಟ್ ಪಡೆಯಲು ಅಲ್ಪಸಂಖ್ಯಾತರಿಂದ 100ಕ್ಕೂ ಹೆಚ್ಚು ಹೆಚ್ಚು ಅರ್ಜಿಗಳು ಬಂದಿದ್ದು, ಅದನ್ನು ಸಮಿತಿ ಮೂಲಕ ಪರಿಶೀಲಿಸಿ ನಂತರ ಪರಿಷ್ಕೃತ ಪಟ್ಟಿಯನ್ನು ಕೆಪಿಸಿಸಿ ನೀಡಲಾಗುವುದು. ಹೆಚ್ಚು ಟಿಕೆಟ್ ನೀಡಬೇಕೆಂದು ಪಕ್ಷಕ್ಕೆ ಮನವಿ ಮಾಡಲಾಗುವುದು ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥರಾದ ಜಬ್ಬಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮೆಹರೋಜ್ ಖಾನ್, ಸಯಿದ್ ಅಹ್ಮದ್, ಮೆಹಬೂಬ್ ಪಾಷ. ರಾಮಚಂದ್ರಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
























































