ಬೆಂಗಳೂರು: ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಹಾಗೂ ರಸ್ತೆಗುಂಡಿ ಸಮಸ್ಯೆ ವಿರುದ್ಧ ಒಂದು ವಾರ ಬಿಜೆಪಿ ಜನಪ್ರತಿನಿಧಿಗಳ ವತಿಯಿಂದ ಸರ್ಕಾರದ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಸಮಸ್ಯೆಗಳ ಕುರಿತು ಚರ್ಚಿಸಲು ಎಲ್ಲ ಜನಪ್ರತಿನಿಧಿಗಳ ಸಭೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ಬೆಂಗಳೂರು ಗಾರ್ಬೇಜ್ ಸಿಟಿಯಾಗಿ ಬದಲಾಗಿದೆ. ಎಲ್ಲ ರಸ್ತೆಗಳಲ್ಲಿ ಗುಂಡಿಗಳು ಹಾಗೂ ಕಸದ ರಾಶಿ ಕಂಡುಬರುತ್ತಿದೆ. ನಗರಕ್ಕೆ ದ್ರೋಹ ಬಗೆದ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಹಾಗೂ ಒಂದು ವಾರ ಕಾಲ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 6 ರಿಂದ 15 ರವರೆಗೆ ಸಹಿ ಸಂಗ್ರಹ ಅಭಿಯಾನ ಮಾಡಲಾಗುವುದು ಎಂದು ತಿಳಿಸಿದರು.
ಎ ಖಾತಾ, ಬಿ ಖಾತಾ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸಲಾಗುವುದು. ಇದರಲ್ಲಿ ಸರ್ಕಾರ ದುಡ್ಡು ಹೊಡೆಯುವ ಸ್ಕೀಮು ಮಾಡಿದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ಆ ಹಣವನ್ನು ಹೊಂದಿಸಲು ಈ ಕ್ರಮ ತರಬೇಕಿಲ್ಲ. ಇಷ್ಟೊಂದು ಹಣವನ್ನು ಜನರು ಪಾವತಿಸಲು ಸಾಧ್ಯವಿಲ್ಲ. ನೋಂದಣಿ ಮೇಲೆ 5% ಹೆಚ್ಚಿಸಿ ಕಮಿಶನ್ ಹೊಡೆಯಲು ಪ್ರಯತ್ನ ಮಾಡಲಾಗಿದೆ. ಕಸದ ಸೆಸ್ ತಂದು ಜನರ ಮೇಲೆ ಹೊರೆ ಹಾಕಲಾಗಿದೆ. ಬೆಸ್ಕಾಂನಲ್ಲಿ ಒಸಿ, ಸಿಸಿ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ. ತಾತ್ಕಾಲಿಕವಾಗಿ ವಿದ್ಯುತ್ ಪಡೆದರೆ ಮೂರು ಪಟ್ಟು ಶುಲ್ಕ ನೀಡಬೇಕಿದ್ದು, ಇದನ್ನೇ ಬೆಸ್ಕಾಂನಿಂದ ಪ್ರೋತ್ಸಾಹಿಸಲಾಗುತ್ತಿದೆ. ಜನರಿಗೆ ಇಂತಹ ದುಬಾರಿ ಬ್ರ್ಯಾಂಡ್ ಬೆಂಗಳೂರು ಬೇಕಿಲ್ಲ. ಸಾಮಾನ್ಯ ಜನರ ಬಗ್ಗೆ ಚಿಂತಿಸುವ ಬೆಂಗಳೂರು ಬೇಕಿದೆ ಎಂದರು.
ಸುರಂಗ ರಸ್ತೆ ನಿರ್ಮಿಸಲು ಸಾವಿರಾರು ಕೋಟಿ ರೂ. ಖರ್ಚು ಮಾಡುವುದು ಬೇಡ. ಲಾಲ್‌ಬಾಗ್‌ನಂತಹ ಉದ್ಯಾನಗಳನ್ನು ನಾಶ ಮಾಡಿ ರಸ್ತೆ ಮಾಡುವುದು ಬೇಕಿಲ್ಲ. ಈ ಹಿಂದೆ ಉಕ್ಕಿನ ಸೇತುವೆ ನಿರ್ಮಿಸಲು ಮುಂದಾದಾಗ ಕಾಂಕ್ರೀಟ್ ರಸ್ತೆ ಮಾಡಿ ಎಂದು ಆಗ್ರಹಿಸಿದ್ದೆವು. ಈಗಲೂ ಸುರಂಗ ರಸ್ತೆ ಬೇಡವೆಂದು ಹೇಳುತ್ತಿಲ್ಲ. ಆದರೆ ದೆಹಲಿ ನಾಯಕರಿಗೆ ಅನುಕೂಲ ಮಾಡಿಕೊಡಲು ಸುರಂಗ ಕೊರೆಯುವುದು ಬೇಕಿಲ್ಲ. ಈಗಾಗಲೇ 150 ಬಗೆಯ ದರ ಏರಿಕೆಗಳನ್ನು ಮಾಡಲಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದರು.
ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಬೆಳಗಾವಿ ಹಾಗೂ ಚಾಮರಾಜನಗರದಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಾಳೆ ನಾನು ಚಾಮರಾಜನಗರಕ್ಕೆ ಹೋಗಿ ರೈತರ ಅಹವಾಲು ಆಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಹಾಗೂ ಪಾದಯಾತ್ರೆ ಮಾಡುತ್ತೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮತ್ತು ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಬೆಂಗಳೂರಿಗೆ ಎಷ್ಟು ಅನುದಾನ ನೀಡಿದೆ, ಎಷ್ಟು ಅಭಿವೃದ್ಧಿ ಕಾರ್ಯಗಳಾಗಿದೆ ಎಂದು ತಿಳಿಸುತ್ತೇವೆ. ಕಾಂಗ್ರೆಸ್ ಎಷ್ಟು ಅಭಿವೃದ್ಧಿ ಮಾಡಿದೆ ಎಂದು ತಿಳಿಸಲಿ. ಸಿಎಂ ಬದಲಾವಣೆ ಆಗಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ.ಶಿವಕುಮಾರ್ ಸ್ಪಷ್ಟವಾಗಿ ತಿಳಿಸಲಿ. ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಸ್ಪಷ್ಟೀಕರಣ ತಿಳಿಸಲಿ. ಹೀಗೆ ಹೇಳಿದರೆ ನಾವೇ ಸುಮ್ಮನಾಗುತ್ತೇವೆ. ಇವರಿಬ್ಬರಲ್ಲಿ ಯಾರೇ ಸಿಎಂ ಆದರೂ ಅಭಿವೃದ್ಧಿ ಮಾಡಲ್ಲ ಎಂದರು.


















































