ಬೆಂಗಳೂರು: ನರಸೀಪುರದ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮಕ್ಕೆ (KSIC) ಸೇರಿದ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನು ಕೈಬಿಡಲಾಗುವುದು ಎಂದು ರೇಷ್ಮೆ ಸಚಿವರು ಮಾರ್ಚ್ 9ರಂದು ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಈ ಘೋಷಣೆಯ ಬೆನ್ನಲ್ಲೇ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಸಚಿವರ ಘೋಷಣೆ ಕೇವಲ ಕಣ್ಣೊರೆಸುವ ತಂತ್ರವೇ? ಎಂದವರು ಪ್ರಶ್ನಿಸಿದ್ದಾರೆ.
ಸಚಿವರು ಸದನದಲ್ಲಿ ಭರವಸೆ ನೀಡಿದ ಮರುದಿನವೇ (ಮಾರ್ಚ್ 10), ಮುಖ್ಯಮಂತ್ರಿಗಳ ಕ್ಷೇತ್ರವಾದ ವರುಣಾದ ಪ್ರಭಾವಿ ನಾಯಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ. KSIC ಘಟಕವು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬುದು ಅವರ ಆರೋಪ ಎಂದಿರುವ ಅಶೋಕ್, KSIC ಸಂಸ್ಥೆಯನ್ನು ಹಂತ-ಹಂತವಾಗಿ ಮುಚ್ಚಲು ಸರ್ಕಾರ ಒಂದು ‘ಚಕ್ರವ್ಯೂಹ’ ರಚಿಸಿದಂತೆ ಕಾಣುತ್ತಿದೆ: ETP ಅವಶ್ಯಕತೆ: ಕಾರ್ಖಾನೆಯ ತ್ಯಾಜ್ಯ ಸಂಸ್ಕರಣಾ ಘಟಕ (ETP) ಸ್ಥಾಪಿಸಲು ಆ 5 ಎಕರೆ ಭೂಮಿ ಅತ್ಯಗತ್ಯ ಎಂದು ತಾಂತ್ರಿಕ ವರದಿ ಹೇಳಿತ್ತು.
ಭೂಮಿ ಹಸ್ತಾಂತರ: ಇಷ್ಟಿದ್ದರೂ ಸರ್ಕಾರ ಹಠಕ್ಕೆ ಬಿದ್ದು ಅದೇ ಜಾಗವನ್ನು ಕ್ರೀಡಾಂಗಣಕ್ಕೆ ನೀಡಲು ಮುಂದಾಯಿತು ಎಂದು ಗಮನಸೆಳೆದಿದ್ದಾರೆ.
ಕ್ರೀಡಾಂಗಣ ಯೋಜನೆ ಕೈಬಿಡುವುದಾಗಿ ಸದನದಲ್ಲಿ ಹೇಳಿದರೂ, ಆ ಭೂಮಿಯನ್ನು ಕ್ರೀಡಾ ಇಲಾಖೆಯಿಂದ ಮತ್ತೆ KSIC ಗೆ ವಾಪಸ್ ನೀಡುವ ಅಧಿಕೃತ ಆದೇಶವನ್ನು ಸರ್ಕಾರ ವಿಳಂಬ ಮಾಡುತ್ತಿದೆ ಎಂದಿರುವ ಅವರು, ETP ಘಟಕ ಇಲ್ಲ ಎಂಬ ಕಾರಣ ನೀಡಿ ಕಾರ್ಖಾನೆಯನ್ನು ಮುಚ್ಚುವಂತೆ ನೋಟಿಸ್ ಕೊಡಿಸಲಾಗುತ್ತಿದೆ ಮೊದಲು ಜಾಗ ಕಿತ್ತುಕೊಳ್ಳುವುದು, ನಂತರ ಅದೇ ಜಾಗ ಇಲ್ಲದ ಕಾರಣಕ್ಕೆ ನಿಯಮ ಉಲ್ಲಂಘನೆಯ ನೆಪ ಹೂಡಿ ಕಾರ್ಖಾನೆಗೆ ಬೀಗ ಜಡಿಯುವುದು – ಇದು ಆಡಳಿತವೋ ಅಥವಾ ಭೂ ಮಾಫಿಯಾದ ಪರವಾದ ಸಂಚೋ? ಎಂದು ಪ್ರಶ್ನಿಸಿದ್ದಾರೆ.
ಸಾವಿರಾರು ಕುಟುಂಬಗಳು ಕೆ.ಎಸ್.ಐ.ಸಿ ನಂಬಿ ಬದುಕುತ್ತಿವೆ. ವಿಶ್ವವಿಖ್ಯಾತ ‘ಮೈಸೂರು ಸಿಲ್ಕ್’ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ. ರಾಜಕೀಯ ಲಾಭಕ್ಕಾಗಿ ಮತ್ತು ಭೂ ಕಬಳಿಕೆಗಾಗಿ ಇಂತಹ ಐತಿಹಾಸಿಕ ಸಂಸ್ಥೆಯನ್ನು ಬಲಿ ಕೊಡುವುದು ಅಕ್ಷಮ್ಯ ಅಪರಾಧ ಎಂದು ಅವರು ಪ್ರತಿಪಾದಿಸಿದ್ದಾರೆ.
ಕರ್ನಾಟಕದಲ್ಲಿ ನಿಮ್ಮ ಸರ್ಕಾರ ‘ಲ್ಯಾಂಡ್ ಗ್ರ್ಯಾಬ್ ಸರ್ಕಾರ’ವಾಗಿ ಬದಲಾಗಿದೆಯೇ? ಮೈಸೂರು ರೇಷ್ಮೆಯ ಘನತೆಯನ್ನು ಮಣ್ಣುಪಾಲು ಮಾಡಬೇಡಿ ಎಂದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.





















































