ಮಂಗಳೂರು: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರು ಇದೀಗ ಎರಡು ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಈ ಸಂದರ್ಭವನ್ನು ಬಿಜೆಪಿ ಕಾರ್ಯಕರ್ತರು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ. ಅತ್ತ ಮೋದಿ ಸರ್ಕಾರದ ಸಾಧನೆ, ಇತ್ತ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳ ನಡುವೆ ರಾಯಭಾರಿಯಾಗಿರುವ ನಳಿನ್ ಅವರ ಪಕ್ಷ ಸಂಘಟನಾ ಚತುರತೆಯ ಗುಣಗಾನ ನಡೆಯುತ್ತಿದೆ.
ಈ ನಡುವೆ ನಳಿನ್ ಅವರ ತವರು ಜಿಲ್ಲೆ ದಕ್ಷಿಣ ಕನ್ನಡ ಇಂದು ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ರಾಜ್ಯಾಧ್ಯಕ್ಷರಾಗಿ ಎರಡು ವರ್ಷಗಳ ಜವಾಬ್ಧಾರಿಯನ್ನು ಪೂರೈಸಿರುವ ನಳಿನ್ ಕುಮಾರ್, ತಮ್ಮ ಮುಂದಿನ ನಡೆಗೆ ತನ್ನ ಆದ್ಯ ಗುರುವಿನಿಂದ ಆಶೀರ್ವಾದ ಪಡೆದ ಸನ್ನಿವೇಶ ಕಾರ್ಯಕರ್ತರ ಸಂತಸಕ್ಕೆ ಕಾರಣವಾಯಿತು.
ಕರ್ನಾಟಕದ ಪಾಲಿಗೆ ‘ಆರೆಸ್ಸೆಸ್ ಹುಲಿ’ ಎಂದೇ ಗುರುತಾಗಿರುವವರು ಕಲ್ಲಡ್ಕ ಪ್ರಭಾಕರ ಭಟ್. ಅವರ ಗರಡಿಯಲ್ಲಿ ಪಳಗಿದ ಧನಂಜಯ ಕುಮಾರ್, ಡಿ.ವಿ.ಸದಾನಂದಗೌಡ, ಶೋಭಾ ಕರಂದ್ಲಾಜೆ ಸಹಿತ ಹಲವರು ಸಂಸದರಾಗಿ, ಕೇಂದ್ರ ಮಂತ್ರಿಗಳಾಗಿ ಹಳ್ಳಿಯಿಂದ ದಿಲ್ಲಿಯವರೆಗೂ ಮನೆಮಾತಾದವರು. ಕೇಂದ್ರ ಸಚಿವರಾಗಿ ರಾಜಕೀಯ ಮೇರು ಶಿಖರವನ್ನು ಏರಿದವರು. ಇದೇ ಗುರುವಿನ ಕೃಪೆಯಿಂದಾಗಿಯೇ ನಳಿನ್ ಕುಮಾರ್ ಕಟೀಲ್ ಕೂಡಾ ಸಂಸದರಾಗಿದ್ದಾರೆ.
ಆರೆಸ್ಸೆಸ್‌ನ ಐಟಿಸಿ, ಒಟಿಸಿ ಶಿಕ್ಷಣ ನಂತರ ಪ್ರಚಾರಕ್ ಆಗಿ, ತಾಲೂಕು ಕಾರ್ಯವಾಹರಾಗಿ ಶಾಖೆಗಳನ್ನು ಬೆಳೆಸಿ, ಸಂಘದ ಸೇನಾನಿಯಾಗಿದ್ದ ನಳಿನ್ ಕುಮಾರ್ ಅವರನ್ನು ತಮ್ಮ ಶಿಷ್ಯನ ಸ್ಥಾನದಲ್ಲಿ ಇರಿಸಿ ಸಂಸದರನ್ನಾಗಿ ಮಾಡಿದವರು ಇದೇ ಪ್ರಭಾಕರ ಭಟ್. ದಶಕದ ಹಿಂದೆ ರಾಜ್ಯ ಬಿಜೆಪಿಯಲ್ಲಿ ಬಿನ್ನಮತ ಭುಗಿಲೆದ್ದ ಸಂದರ್ಭದಲ್ಲಿ ಕೋರ್ ಕಮಿಟಿ ರಚನೆಯಾದಾಗ ನಳಿನ್ ಕುಮಾರ್ ಅವರನ್ನು ಸದಸ್ಯರನ್ನಾಗಿಸಿ ರಾಜ್ಯ ಮಟ್ಟದ ಜವಾಬ್ಧಾರಿ ಕೊಡಿಸಿದವರೂ ಡಾ.ಪ್ರಭಾಕರ ಭಟ್. ಈ ಜವಾಬ್ಧಾರಿ ಮೂಲಕವೇ ಕಮಲ ಪಾಳಯದ ಪ್ರಭಾವಿ ನಾಯಕರಾಗಿ ಬೆಳೆದ ನಳಿನ್ ಕುಮಾರ್ ಇದೀಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ.
ಈ ನಡುವೆ ಡಾ.ಪ್ರಭಾಕರ ಭಟ್ ಹಾಗೂ ನಳಿನ್ ನಡುವೆ ಮನಸ್ತಾಪದ ಸನ್ನಿವೇಶ ಸೃಷ್ಟಿಯಾಗಿತ್ತೆಂಬ ಮಾತುಗಳೂ ಹರಿದಾಡುತ್ತಿತ್ತು. ಇದೆಲ್ಲದರ ನಡುವೆ ನಳಿನ್ ಕುಮಾರ್ ಅವರಿಂದು ತಮ್ಮ ರಾಜಕೀಯ ಗುರುವನ್ನು ಭೇಟಿಯಾಗಿ ಆಶೀರ್ವಾದ ಪಡೆದ ನಡೆಯು ಬಿಜೆಪಿ ಕಾರ್ಯಕರ್ತರ ಪಾಳಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.