ಬೆಂಗಳೂರು: ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ ಹಗರಣ ನಡೆದಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದು ಅರ್ಹತೆ ಇಲ್ಲದ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ ಎಂಬ ಆರೋಪವನ್ನು ಸಚಿವ ಹೆಚ್.ಸಿ.ಮಹದೇವಪ್ಪ ಅಲ್ಲಗಳೆದಿದ್ದಾರೆ.
ಆರೋಪ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಇದು ವಾಸ್ತವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವಂತಹ ಸಂಗತಿಯಾಗಿದ್ದು, ಮಾಧ್ಯಮಗಳ ಮೂಲಕ ತಪ್ಪಾದ ವಿವರಗಳನ್ನು ಸಾರ್ವಜನಿಕರಿಗೆ ನೀಡುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.
ಆರೋಪ ಮಾಡುತ್ತಿರುವ ಜನರಿಗೆ ಸರ್ಕಾರದ ಯೋಜನೆಗಳಿಗೆ ನಿಗದಿ ಪಡಿಸಲಾದ ಅನುದಾನದ ಕುರಿತಾಗಿ ಮಾಹಿತಿಯೇ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮುಖ್ಯವಾಗಿ ಇಲ್ಲಿ ನಿಯಮಾವಳಿಗಳ ಪ್ರಕಾರವೇ ಅರ್ಹ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದ್ದು, ಟೆಂಡರ್ ನ ನಿಯಮಾವಳಿಗಳನ್ನು ಸರಿಯಾಗಿ ತಿಳಿಯದೇ ಯಾರೋ ಪಟ್ಟಭದ್ರ ಹಿತಾಸಕ್ತಿಗಳು ಮಾಡಿರುವ ಆಧಾರ ರಹಿತವಾದ ಆರೋಪಗಳನ್ನು ಆಧರಿಸಿ ಸುದ್ಧಿಯನ್ನು ಪ್ರಕಟಿಸಲಾಗಿದ್ದು, ದಯಮಾಡಿ ಮಾಧ್ಯಮಗಳು ಸರಿಯಾದ ಅಂಶಗಳನ್ನು ಪರಿಶೀಲನೆ ಮಾಡಿ ಸುದ್ದಿಯನ್ನು ಪ್ರಕಟಿಸುವ ಜವಾಬ್ದಾರಿ ತೋರಬೇಕೆಂದು ಅವರು ವಿನಂತಿಸಿದ್ದಾರೆ.
ಇನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ತರಬೇತಿ ನೀಡುವ ಹಲವು ಸಂಸ್ಥೆಗಳು ಇದ್ದು ಟೆಂಡರ್ ದೊರೆಯದ ಕೆಲವು ಸಂಸ್ಥೆಗಳು ಈ ರೀತಿಯಾಗಿ ಅಪಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿದ್ದು ಅಂತವರ ಮೇಲೆ ಈಗಾಗಲೇ ಡಿಫಮೇಷನ್ ಕೇಸ್ ಅನ್ನು ದಾಖಲಿಸಲಾಗುವುದು ಎಂದು ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.
ಬಹುಮುಖ್ಯವಾಗಿ ಪರಿಶಿಷ್ಟ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿ ಕೆಲಸ ಮಾಡುತ್ತಿರುವ ನಮ್ಮ ಸರ್ಕಾರವು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ವಿಷಯದಲ್ಲಿ ಸ್ಪಷ್ಟತೆಯಿಂದ ಕೆಲಸ ಮಾಡುತ್ತಿದ್ದು ಇಂತಹ ಸುಳ್ಳು ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದಿದ್ದಾರೆ.
‘ನಮ್ಮ ಇಲಾಖೆಯ ವತಿಯಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಪ್ರಯೋಜನ ಆಗಿದ್ದು ಹಗರಣ ಮಾಡುತ್ತಾ ಕುಳಿತಿದ್ದರೆ ಇಷ್ಟು ಮಂದಿಗೆ ಪ್ರಯೋಜನ ಆಗುತ್ತಿತ್ತಾ?’ ಎಂದು ಪ್ರಶ್ನಿಸಿದ್ದಾರೆ.
‘ಲೋಕಾಯುಕ್ತಕ್ಕೆ ನನ್ನ ವಿರುದ್ಧ ರಾಜಕೀಯ ಪ್ರೇರಿತವಾಗಿ ಮತ್ತು ಸಲ್ಲದ ಕಾರಣಗಳಿಗೆ ದೂರನ್ನು ಸಲ್ಲಿಸಲಾಗಿದೆ. ಆದರೆ ಎಲ್ಲವೂ ನಿಯಮಾವಳಿಗಳ ಪ್ರಕಾರವೇ ಜರುಗಿದ್ದು ಇಂತಹ ದೂರುಗಳಿಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಮಹದೇವಪ್ಪ ತಿಳಿಸಿದ್ದಾರೆ.
ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ ಹಗರಣ ನಡೆದಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದು ಅರ್ಹತೆ ಇಲ್ಲದ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ ಎಂಬ ಆರೋಪವನ್ನು ಮಾಡಿವೆ. ಇದು ವಾಸ್ತವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವಂತಹ ಸಂಗತಿಯಾಗಿದ್ದು, ಮಾಧ್ಯಮಗಳ ಮೂಲಕ ತಪ್ಪಾದ ವಿವರಗಳನ್ನು ಸಾರ್ವಜನಿಕರಿಗೆ ನೀಡುವ ಪ್ರಯತ್ನ… pic.twitter.com/K3X5HJcECS
— Dr H C Mahadevappa(Buddha Basava Ambedkar Parivar) (@CMahadevappa) October 28, 2025




















































