ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಆರೋಪಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಮೃತನ ಕುಟುಂಬದವರಿಗೆ ರೂ. 1 ಕೋಟಿ ಪರಿಹಾರ ನೀಡಬೇಕು. ಹಾಗೂ ಮೃತನ ಪತ್ನಿಗೆ ತಾತ್ಕಾಲಿಕವಾಗಿ ಉದ್ಯೋಗ ಕೊಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ಭೇಟಿನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಒಂದು ಅಮಾನವೀಯವಾದ ಸಾವಾಗಿದೆ, ಈ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರೇ ನೇರ ಕಾರಣ ಎಂದು ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಮುನ್ನ ವಾಟ್ಸಾಪ್ ನಲ್ಲಿ ಕಳುಹಿಸಿದ ಡೆತ್ ನೋಟ್ ನಲ್ಲೂ ಹೇಳಿದ್ದಾರೆ, ಮೃತರ ತಾಯಿ ಮತ್ತು ಹೆಂಡತಿ ಇದನ್ನೇ ಹೇಳಿದ್ದಾರೆ ಹಾಗೂ ತಮಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ. ನಾವು ಇಂದು ಬಂದಿದ್ದು ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಬೇಕು ಮತ್ತು ನ್ಯಾಯ ಕೊಡಿಸಲು ಹೋರಾಟ ಮಾಡಬೇಕು, ಪಕ್ಷದ ವತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದು ಹೇಳಿದರು.
ಸಂತೋಷ್ ಪಾಟೀಲ್ ಶ್ರೀಮಂತನಲ್ಲ, ಒಂದು ಸಾಮಾನ್ಯ ಕುಟುಂಬದವನು. ಸಣ್ಣ ಪುಟ್ಟ ಗುತ್ತಿಗೆ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ಈಗ ಸಾಲ ಮಾಡಿ ರೂ. 4 ಕೋಟಿ ವೆಚ್ಚದ ಕಾಮಗಾರಿಗಳನ್ನು ಮಾಡಿದ್ದಾರೆ. ಸಚಿವರು ಹೇಳದೆ ಯಾರು ಬೇಕಾದರೂ ಸುಮ್ಮನೆ ಕೆಲಸ ಮಾಡಲು ಆಗಲ್ಲ, ಹಾಗೆ ಕೆಲಸ ಮಾಡಲು ಹೊರಟರೆ ಅಧಿಕಾರಿಗಳು ಸುಮ್ಮನೆ ಬಿಡುತ್ತಾರ? ಕೆಲಸ ಮಾಡೋಕೆ ಹೇಳಿ, ವರ್ಕ್ ಆರ್ಡರ್ ಮತ್ತು ಬಿಲ್ ಪಾವತಿ ಮಾಡೋಕೆ 40% ಕಮಿಷನ್ ಗೆ ಬೇಡಿಕೆ ಇಟ್ಟಿದ್ದಾರೆ. ಇಷ್ಟು ಹಣವನ್ನು ಸಂತೋಷ್ ಪಾಟೀಲ್ ಇಂದ ಹೊಂದಿಸಲು ಸಾಧ್ಯವಾಗದ ಕಾರಣಕ್ಕೆ ಬಿಲ್ ಪಾವತಿ ಮಾಡಿಲ್ಲ ಎಂದರು.
ರಾಜ್ಯ ಸರ್ಕಾರ ಸಂತೋಷ್ ಪಾಟೀಲ್ ಪೂರ್ಣಗೊಳಿಸಿದ್ದ ರೂ. 4 ಕೋಟಿ ವೆಚ್ಚದ ಎಲ್ಲಾ ಕಾಮಗಾರಿಯ ಬಿಲ್ ಅನ್ನು ಕೂಡಲೇ ಸಂದಾಯ ಮಾಡಬೇಕು. ಸಾಲ ಮಾಡಿ, ಹೆಂಡತಿಯ ಒಡವೆ ಅಡವಿಟ್ಟು ಬಡ್ಡಿಗೆ ಹಣ ತಂದು ಕೆಲಸ ಮಾಡಿದ್ದಾರೆ, ಸಾಲ ಕೊಟ್ಟವರಿಗೆ ಈಗ ವಾಪಾಸು ಕೊಡಬೇಕು.
ಯಾವುದೇ ಜೀವಕ್ಕೆ ಬೆಲೆ ಕಟ್ಟಲಾಗಲ್ಲ, ಆದರೂ ಮೃತ ಸಂತೋಷ್ ಪಾಟೀಲ್ ಅವರಿಗಿನ್ನೂ ಚಿಕ್ಕ ವಯಸ್ಸು, ಮದುವೆ ಆಗಿ ಮೂರು ವರ್ಷ ಆಗಿತ್ತು. ಚಿಕ್ಕ ಮಕ್ಕಳು ಇದ್ದಾರೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಮೃತನ ಕುಟುಂಬದವರಿಗೆ ರೂ. 1 ಕೋಟಿ ಪರಿಹಾರ ನೀಡಬೇಕು ಎಂದವರು ಆಗ್ರಹಿಸಿದರು.
ಮೃತನ ಪತ್ನಿಗೆ ತಾತ್ಕಾಲಿಕವಾಗಿ ಉದ್ಯೋಗ ಕೊಡಿಸುವ ಕೆಲಸವನ್ನು ನಾವು ಮಾಡುತ್ತೇವೆ. ಆಕೆ ಬಿ.ಎ ಪದವೀಧರೆ ಹಾಗಾಗಿ ಸರ್ಕಾರಿ ಉದ್ಯೋಗ ಕೊಡಬೇಕು. ನಮ್ಮ ಪಕ್ಷದ ವತಿಯಿಂದ ರೂ. 11 ಲಕ್ಷದ ಚೆಕ್ ಅನ್ನು ಮೃತನ ಕುಟುಂಬದವರಿಗೆ ನೀಡುತ್ತೇವೆ ಎಂದ ಸಿದ್ದದರಾಮಯ್ಯ, ಮೃತ ಸಂತೋಷ್ ಪಾಟೀಲ್ ಅವರ ತಾಯಿ ಮತ್ತು ಪತ್ನಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದೇವೆ. ಈಶ್ವರಪ್ಪ ಅವರನ್ನು ಈ ಕೂಡಲೇ ಬಂಧಿಸಬೇಕು. ಇದೇ ಆರೋಪ ಬೇರೆಯವರ ಮೇಲೆ ಬಂದಿದ್ದರೆ ಇಷ್ಟರೊಳಗೆ ಅವರನ್ನು ಬಂಧಿಸುತ್ತಿರಲಿಲ್ಲವೇ? ಹಾಗೆಯೇ ಈಶ್ವರಪ್ಪ ಅವರನ್ನು ಬಂಧಿಸಬೇಕು. ಕಾನೂನು ಎಲ್ಲರಿಗೂ ಒಂದೇ ಎಂದರು.
ಈಶ್ವರಪ್ಪ ಮತ್ತವರ ಪಿಎ ಗಳು 40% ಕಮಿಷನ್ ಗೆ ಬೇಡಿಕೆ ಇಟ್ಟಿದ್ದರು ಎಂದು ಸಂತೋಷ್ ಪಾಟೀಲ್ ಸಹೋದರ ನೀಡಿರುವ ದೂರಿನಲ್ಲಿ ಸ್ಪಷ್ಟವಾಗಿದೆ, ಹಾಗಾಗಿ ಆರೋಪಿಗಳ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಬೇಕು ಎಂದೂ ಒತ್ತಾಯಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಅವರಿಗೂ ಈಶ್ವರಪ್ಪ ಅವರು ಕಾಮಗಾರಿ ಮಾಡುವಂತೆ ಸಂತೋಷ್ ಪಾಟೀಲ್ ಅವರಿಗೆ ಹೇಳಿರುವುದು ಗೊತ್ತಿದೆ. ನಾಗೇಶ್ ಅವರು ಈ ಬಗ್ಗೆ ಮಾತನಾಡಿದ್ದು ‘ನಾನೇ ಸಂತೋಷ್ ಪಾಟೀಲರನ್ನು ಈಶ್ವರಪ್ಪ ಬಳಿ ಕರೆದುಕೊಂಡು ಹೋಗಿದ್ದೆ, ಅವರೇ ಕಾಮಗಾರಿ ಮಾಡಲು ಹೇಳಿದ್ದರು’ ಎಂದಿದ್ದಾರೆ. ಸಚಿವರೇ ಹೇಳಿದ್ದರಿಂದ ಕಾಮಗಾರಿಗೆ ಪಂಚಾಯತಿ ಅವರು ಅವಕಾಶ ನೀಡಿದ್ದಾರೆ. ಆರೋಪಿ ಈಶ್ವರಪ್ಪ ಅವರ ಎಲ್ಲಾ ಹೇಳಿಕೆಗಳಿಗೂ ಉತ್ತರ ಕೊಡಬೇಕಾದ ಅಗತ್ಯ ಇಲ್ಲ. ಕೊಲೆ ಮಾಡಿದವನು ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳಲ್ಲ. ಈಶ್ವರಪ್ಪ ಅವರು ಇದನ್ನೇ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.