ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ದಕ್ಷಿಣದ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ತಮಿಳುನಾಡು ರಾಜ್ಯ ವರುಣನ ಆರ್ಭಟಕ್ಕೆ ನಲುಗಿಹೋಗಿದೆ.
ಚೆನ್ನೈನಲ್ಲಿ ನಳೆ ಹಾಗೂ ಮಳೆ ಸಂಬಂಧಿತ ಸರಣಿ ದುರ್ಘಟನೆಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ. ಒಂದು ಅಂದಾಜಿನ ಪ್ರಕಾರ 270ಕ್ಕೂ ಹೆಚ್ಚು ಗುಡಿಸಲುಗಳು, 70ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ.
ಈ ನಡುವೆ, ಇನ್ನೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಆಂಧ್ರಪ್ರದೇಶ ಕರಾವಳಿಯಲ್ಲೂ ಮಳೆಯಾಗುತ್ತಿದ್ದು ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.