ಬೆಂಗಳೂರು: ಜೆಡಿಎಸ್ ಆಯೋಜಿಸಿರುವ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಸ್ವಿಯಾಗಿ ನಡಿದಿದ್ದು, ಇದೇ ಮೇ ತಿಂಗಳ 13ರಂದು ನೆಲಮಂಗಲ ಟೋಲ್ ಪ್ಲಾಜಾ ಬಳಿ ಬೃಹತ್ ಜನತಾ ಜಲಧಾರೆ ಸಮಾವೇಶ ನಡೆಯಲಿದೆ.
ಜಲಧಾರೆ ಕಾರ್ಯಕ್ರಮವು ಈ ಸಮಾವೇಶದ ಮೂಲಕ ಸಮಾಪ್ತಿಯಾಗಲಿದ್ದು, ಆ ಬೃಹತ್ ಸಮಾವೇಶದ ಸಿದ್ಧತೆ ಮತ್ತು ರೂಪುರೇಶೆಗಳ ಬಗ್ಗೆ ಇಂದು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆ (ಕೋರ್ ಕಮಿಟಿ) ಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಸಭೆಯ ನಂತರ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ ಅವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು.
ಇದೇ ಸಭೆಯಲ್ಲಿ ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಚಂದ್ರಶೇಖರ್ ಲೋಣಿ ಅವರನ್ನು ಕಣಕ್ಕಿಳಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದವರು ತಿಳಿಸಿದರು.
ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜತೆಗೆ, ಮಾಜಿ ಸಚಿವ ಎನ್. ಎಂ.ನಬಿ, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಗೋವಿಂದರಾಜು, ಶಾಸಕರಾದ ಕೆ.ಎಂ. ಕೃಷ್ಣಾರೆಡ್ಡಿ, ವೆಂಕಟರಾವ್ ನಾಡಗೌಡ, ಪುಟ್ಟರಾಜು, ಅನ್ನದಾನಿ, ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕಿ ಶಾರದಾ ಪೂರ್ಯ ನಾಯಕ್, ತಿಮ್ಮರಾಯಪ್ಪ, ವೆಂಕಟ ಶಿವಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಹಾಗೂ ಜಪ್ರುಲ್ಲಾ ಖಾನ್, ಸುಧಾಕರ ಶೆಟ್ಟಿ, ಸಮೃದ್ಧಿ ಮಂಜುನಾಥ್, ನಾಸಿರ್ ಭಗವಾನ್, ವಿಲ್ಸನ್ ರೆಡ್ಡಿ, ಹನುಮಂತಪ್ಪ ಮಾವಿನಮರದ ಮುಂತಾದವರು ಹಾಜರಿದ್ದರು.