ದೆಹಲಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ಹೈಕಮಾಂಡ್ ನೇಮಕ ಮಾಡಿದೆ.
ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದರು. ಆದರೆ ಅಲ್ಪ ಮತಗಳಿಂದ ಅವರು ಪರಾಜಿತರಾಗಿದ್ದರು. ತಮಿಳುನಾಡಿನಲ್ಲಿ ಯುವಜನರಿಗೆ ಸ್ಪೂರ್ತಿಯಾಗಿರುವ ಅಣ್ಣಾಮಲೈ ಅವರು ಇದೀಗ ಆ ರಾಜ್ಯದಲ್ಲಿ ಕಮಲ ಪಕ್ಷದ ಸಾರ್ಥಿಯಾಗುತ್ತಿದ್ದಾರೆ.
ಈ ಸಂಬಂಧ ಬಿಜೆಪಿ ಹೈಕಮಾಂಡ್ ಇಂದು ಪ್ರಕಟಣೆಯನ್ನು ಹೊರಡಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷರಾದ ಜೆ. ಪಿ ನಡ್ಡಾ ಅವರು ಅಣ್ಣಾಮಲೈ ಅವರನ್ನು ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈವರೆಗೂ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎಲ್. ಮುರುಗನ್ ಕೇಂದ್ರ ಸಚಿವರಾಗಿ ಅಧಿಕಾರವಹಿಸಿದ್ದು ಅವರಿಂದ ತೆರವಾದ ಸ್ಥಾನಕ್ಕೆ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.