ಮೈಸೂರು: ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂದು ತಾವು ಎಲ್ಲೂ ಹೇಳಿಲ್ಲ. ಬಿರುಕು ಬಿಟ್ಟಿದೆಯಾ ಅಂತ ಸಭೆಯಲ್ಲಿ ಕೇಳಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.
ಕೆಆರ್‌ಎಸ್ ಡ್ಯಾಂಗೆ ಭೇಟಿ ನೀಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆಯಿಂದ ಕೆಆರ್‌ಎಸ್ ಬಿರುಕಾಗುತ್ತೆ ಎಂಬ ಆತಂಕ ತನಗೆ ಇನ್ನೂ ಇದೆ ಎಂದರು.
ಕೆಆರ್‌ಎಸ್‌ನಲ್ಲಿ ಬಿರುಕು ಬಿಟ್ಟಿದೆಯಾ ಎಂದು ದಿಶಾ ಸಭೆಯಲ್ಲಿ ಕೇಳಿರೋದು. ಆದರೆ ಅದನ್ನೇ ಹೊರಗೆ ಬೇರೆ ರೀತಿಯಲ್ಲಿ ಅರ್ಥೈಸಿ ಇಷ್ಟೆಲ್ಲ ಮಾಡಿದ್ದಾರೆ ಎಂದವರು ಅಸಮಾಧಾನ ಹೊರಹಾಕಿದರು.
ಮಂಡ್ಯ ಜಿಲ್ಲೆಯ ಗಣಿ ಅಧಿಕಾರಿಗಳು ಕೂಡ ಏನೂ ಆಗಿಲ್ಲ ಎನ್ನುವಂತೆ ಮಾತನಾಡುತ್ತಾರೆ. ಅವರ ಮೇಲೂ ಒತ್ತಡಗಳು ಇರಬಹುದು. ಈಗಾಗಿ ಸ್ವತಂತ್ರ ತನಿಯಾಗಬೇಕು.ಸಿಬಿಐ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಕೆಆರ್‌ಎಸ್ ಡ್ಯಾಂ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಬ್ಲಾಸ್ಟಿಂಗ್ ಮಾಡುವಂತಿಲ್ಲ. ಗಣಿಗಾರಿಕೆಯಿಂದಾಗಿ ಕೆಆರ್‌ಎಸ್ ಡ್ಯಾಂನಲ್ಲಿ ಕಂಪನ ದಾಖಲಾಗಿದೆ. ಈ ಸಂಬಂಧ ಅಧಿಕೃತ ದಾಖಲೆಗಳೂ ಇವೆ. ಆದ್ದರಿಂದ ಗಣಿಗಾರಿಕೆ ನಿಲ್ಲಬೇಕು ಅಂತ ಹೋರಾಟ ಮಾಡುತ್ತಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು