ಬೆಂಗಳೂರು, ಡಿಸೆಂಬರ್ 04: ಕೋವಿಡ್ ನ ಮೂರು ಪ್ರಕರಣಗಳು ಕಂಡಬಂದಲ್ಲಿ ಕ್ಲಸ್ಟರ್ ಎಂದು ಘೋಷಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ಕುರಿತು ಪ್ರಾಥಮಿಕ ವರದಿ ಬಂದಿದ್ದು, ಪೂರ್ಣ ಪ್ರಮಾಣದ ವರದಿ ಪಡೆಯಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಅನುಸರಿಸುತ್ತಿರುವ ಚಿಕಿತ್ಸಾ ನಿಯಮಗಳನ್ನು ತಿಳಿದುಕೊಳ್ಳಲು ಸೂಚಿಸಲಾಗುದೆ. ಪ್ರಸ್ತುತ ಡೆಲ್ಟಾ ತಳಿಗೆ ನೀಡಲಾಗುತ್ತಿದ್ದ ಚಿಕಿತ್ಸೆಯನ್ನೇ ಮುಂದುವರೆಸಬೇಕೆಂದು ಮಾಹಿತಿಯಿದ್ದು, ಈ ಬಗ್ಗೆ ವೈಜ್ಞಾನಿಕ ವಿಧಾನವನ್ನು ಅನುಸರಿಸಲು ಒತ್ತು ನೀಡಲಾಗಿದೆ ಎಂದರು.
ಒಮಿಕ್ರಾನ್ ತೀವ್ರಗತಿಯಲ್ಲಿ ಹರಡುವ ತಳಿಯಾಗಿದ್ದು, ಪರಿಣಾಮ ಹೆಚ್ಚು ತೀವ್ರವಾಗಿರುವುದಿಲ್ಲ ಎಂದು ತಜ್ಞರ ಅಭಿಪ್ರಾಯ. ಆದರೆ ಸಂಪರ್ಕಿತರ ಪತ್ತೆ ಹಾಗೂ ಚಿಕಿತ್ಸೆಯನ್ನು ತೀವ್ರಗೊಳಿಸಲು ಸೂಚಿಸಿದೆ.
ಎರಡು ವಿಧದ ಕ್ಲಸ್ಟರ್ ನಿರ್ವಹಣೆಗೆ ಸೂಚಿಸಲಾಗಿದ್ದು, ಶಾಲೆ ಮತ್ತು ಹಾಸ್ಟೆಲ್ ಕ್ಲಸ್ಟರ್ ಹಾಗೂ ಬೆಂಗಳೂರಿನ ಅಪಾರ್ಟ್ಮೆಂಟ್ ಸಮುಚ್ಚಯ ಕ್ಲಸ್ಟರ್ ನಿರ್ವಹಣೆ ಮಾಡಲಾಗುವುದು. ಅಲ್ಲಿರುವವರಿಗೆ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ನೀಡಬೇಕು. ಅಪಾರ್ಟ್ಮೆಂಟ್ ನಲ್ಲಿ ಜನ ಸೇರುವ ಸಂದರ್ಭದಲ್ಲಿ ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಸೇರಬಹುದು, ಹೊರಗಿನವರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆಯುಕ್ತ ರಿಗೆ ತಿಳಿಸಿದೆ.
ಶಾಲಾ ಕಾಲೇಜುಗಳಲ್ಲಿ ಪೋಷಕರು, ಸಿಬ್ಬಂದಿ, ಮತ್ತು ನರ್ಸಿಂಗ್, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ತಂಗಿರುವ ಹಾಸ್ಟೆಲ್ ಗಳಲ್ಲಿ ಎಲ್ಲರಿಗೂ ಪರೀಕ್ಷೆ ಕಡ್ಡಾಯ ಹಾಗೂ ಎರಡು ಡೋಸ್ ಲಸಿಕೆ ಅಭಿಯಾನ ಕೈಗೊಳ್ಳಬೇಕು. ಕೋ- ಮಾರ್ಬಿಡಿಟಿ ಇದ್ದವರಿಗೆ ಪರೀಕ್ಷೆ ಯಾಗಬೇಕು. ಎಲ್ಲಿಯೂ ಸಣ್ಣ ಸಂಶಯ ಬರದಂತೆ ವ್ಯವಸ್ಥೆ ಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ದಕ್ಷಿಣ ಆಫ್ರಿಕಾದಿಂದ ಬಂದಿದ್ದ 10 ಜನರ ಸಂಪರ್ಕ ಇಲ್ಲದಿರುವ ಬಗ್ಗೆ ಆರೋಗ್ಯ ಸಚಿವರು ಹೇಳಿಕೆ ನೀಡಿರುವ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರಿಸಿದ ಮುಖ್ಯ ಮಂತ್ರಿಗಳು ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಆರೋಗ್ಯ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಅಧಿವೇಶದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಎರಡು ಡೋಸ್ ಲಸಿಕೆ ಕಡ್ಡಾಯ, ಸ್ಯಾನಿಟೈಸ್ ಮಾಡುವುದು ಹಾಗೂ ಆಸನ ವ್ಯವಸ್ಥೆಯನ್ನು ಕೋವಿಡ್ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡುವ ಮೂಲಕ ಸುರಕ್ಷಿತವಾಗಿ ಬೆಳಗಾವಿಯಲ್ಲಿ ಅಧಿವೇಶನವನ್ನು ಹಮ್ಮಿಕೊಳ್ಳಲಾಗುವುದು ಎಂದರು.