ಬೆಂಗಳೂರು: ಆಸಿಡ್ ದಾಳಿಗೊಳಗಾದ ಎಲ್ಲ ಹೆಣ್ಣು ಮಕ್ಕಳಿಗೆ ನಿವೇಶನ ಹಾಗೂ ಮನೆ ಮನೆ ನೀಡಲು ಆದೇಶವನ್ನು ಹೊರಡಿಸಲಾಗುವುದು ಹಾಗೂ ಅವರಿಗೆ ಸ್ವಯಂ ಉದ್ಯೋಗ ಯೋಜನೆಯಡಿ 5 ಲಕ್ಷ ರೂ.ಗಳವರೆಗೆ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕಂದಾಯ ಇಲಾಖೆಯ ಸಾಮಾಜಿಕ ಭದತ್ರೆ ಮತ್ತು ಪಿಂಚಣೆಗಳ ನಿರ್ದೇಶನಾಲಯದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ‘ಹಲೋ ಕಂದಾಯ ಸಚಿವರೇ – 72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸಹಾಯವಾಣಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಆಸಿಡ್ ದಾಳಿಗೆ ಒಳಗಾದವರು ಬಹಳಷ್ಟು ನೋವನ್ನು ಉಂಡಿರುತ್ತಾರೆ . ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ. ಅವರ ನೆರವಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಅವರ ಮಾಸಾಶನವನ್ನು 3000ದಿಂದ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅದರ ಜೊತೆಗೆ ಈಗ ಅವರಿಗೆ ಬದುಕು ಸಾಗಿಸಲು ಮನೆ ಹಾಗೂ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ಆಳುವುದು ಅಂದರೆ ಜನರ ಸಮಸ್ಯೆಗಳನ್ನು ಅರಿತು ಹೃದಯದಿಂದ ಅದಕ್ಕೆ ಪರಿಹಾರ ಕೊಡುವುದು. ಅನುಷ್ಠಾನ ಮಾಡುವುದು ಆಡಳಿತ. ಈ ಚಿಂತನೆಯಿಂದ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಜನರ ಅಲೆದಾಟ ತಪ್ಪುತ್ತದೆ. 50 ಲಕ್ಷಕ್ಕಿಂತ ಹೆಚ್ಚು ಕುಟುಂಬಗಳಿಗೆ ಇದರಿಂದ ಉಪಯೋಗವಾಗಲಿದೆ. ವ್ಯವಸ್ಥೆ ಸರಿ ಇಲ್ಲದ್ದರಿಂದ ಇದನ್ನು ಮಾಡಬೇಕಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳಡಿಯ ಪಿಂಚಣಿಗಳು ನೇರವಾಗಿ ಮನೆ ಬಾಗಿಲಿಗೆ ಮುಟ್ಟಬೇಕು. ಸಮಾಜದಲ್ಲಿ ಆಶ್ರಯವಿಲ್ಲದವರಿಗೆ, ಸಹಾಯವಿಲ್ಲದವರಿಗೆ ಪಿಂಚಣಿ ನೀಡಲಾಗುತ್ತದೆ. ವ್ಯವಸ್ಥೆ ಸರಿಪಡಿಸಲು ಕಂದಾಯ ಇಲಾಖೆಯನ್ನು ಚುರುಕುಗೊಳಿಸಲಾಗಿದೆ. ವ್ಯವಸ್ಥೆಯನ್ನು ಸರಿಪಡಿಸಿ ಈ ಕೆಲಸವನ್ನು ಮಾಡಲಾಗುತ್ತಿದೆ. ಇದು ಜನಪರವಾದ ಆಡಳಿತ. ಮನೆ ಬಾಗಿಲಿಗೆ ಸರ್ಕಾರ ಬರುವುದು ಅಧಿಕಾರದ ವಿಕೇಂದ್ರೀಕರಣ. ವಿಧಾನಸಭೆಯಲ್ಲಿ ಅಧಿಕಾರ ಹೆಪ್ಪುಗಟ್ಟಬಾರದು. ಅಧಿಕಾರ ನೇರವಾಗಿ ಜೇನುತುಪ್ಪದಂತೆ ಹರಿಯುವಂತಿರಬೇಕು. ಇಂದಿನ ಕಾರ್ಯಕ್ರಮ ನೇರವಾಗಿ ಜನರಿಗೆ ತಲುಪುವಂಥದ್ದು ಎಂದರು.
ಆಡಳಿತ ಮತ್ತು ರಾಜಕಾರಣ ಜನಪರವಾಗಿರಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಅಧಿಕಾರಕ್ಕೆ ಬಂದಾಗ ತಮ್ಮ ಸ್ವಂತ ಅಧಿಕಾರದ ಬಗ್ಗೆ ಚಿಂತೆ ಮಾಡುವವರು ದೇಶವನ್ನು ಹಾನಿ ಮಾಡಿದ್ದಾರೆ. ಅಧಿಕಾರ ಸಿಕ್ಕಾಗ ಜನಪರ ಕೆಲಸ ಮಾಡಿ ನೊಂದವರಿಗೆ ಸಹಾಯ ಮಾಡಿದವರನ್ನು ಜನ ಸದಾ ಕಾಲ ನೆನಪಿಟ್ಟುಕೊಳ್ಳುತ್ತಾರೆ. ಸಮಸ್ಯೆಗಳೊಂದಿಗೆ ಬದುಕುವುದಕ್ಕೂ, ಚರ್ಚೆ ಮಾಡುವುದಕ್ಕೂ ಅಂತರವಿದೆ. ಆಡಳಿತ ಜನರ ಬಳಿಗೆ ಸಮಸ್ಯೆಯ ಬಳಿಗೆ ಹೋದಾಗ ನೈಜ ಪರಿಹಾರ ಸಿಗುತ್ತದೆ. ಜನರ ಜೊತೆಗೆ ನಿರಂತರ ಸಂಪರ್ಕ, ಸಂವಾದ ಇದ್ದರೆ ಜನಪರ ಆಡಳಿತ ನೀಡಲು ಸಾಧ್ಯ. ಜನರ ಮಧ್ಯೆ ಇದ್ದು ಜನರ ಸಮಸ್ಯೆ ತಿಳಿದುಕೊಂಡು ಮೇಲೆ ಬಂದರೆ, ಜನರ ಸಮಸ್ಯೆಗೆ ಖಂಡಿತವಾಗಿಯೂ ಸಮಸ್ಯೆ ಅರ್ಥ ಮಾಡಿಕೊಂಡಿರುತ್ತಾರೆ.
ಅಧಿಕಾರ ಸ್ವೀಕರಿಸಿದ ದಿನ ನನ್ನ ಮೊದಲನೇ ನಿರ್ಣಯ ರೈತರ ಮಕ್ಕಳಿಗೆ ವಿದ್ಯಾ ನಿಧಿ ಯೋಜನೆ ಘೋಷಣೆ ಮಾಡಿದ್ದು. ಹೆಣ್ಣುಮಕ್ಕಳಿಗೂ ಇದನ್ನು ವಿಸ್ತರಿಸಲಾಗಿದೆ. ಸಂಧ್ಯಾ ಸುರಕ್ಷಾ, ಅಂಗವಿಕಲರ, ವಿಧವಾ ವೇತನ ವನ್ನು ಹೆಚ್ಚಳ ಮಾಡಲಾಗಿದೆ. ಇನ್ನೊಬ್ಬರನ್ನು ಬೇಡದಂತೆ ಜೀವನ ನಡೆಸಲು ಈ ಬದಲಾವಣೆ ತರಲಾಗಿದೆ. ಬಜೆಟ್‍ನಲ್ಲಿ ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳ ಬದುಕು ಬಹಳ ಕಷ್ಟ. ಕ್ರೌರ್ಯವನ್ನು ಅನುಭವಿಸಿಯೂ ಆತ್ಮಸ್ರ್ಥೈರ್ಯದಿಂದ ಕೆಲಸ ಮಾಡುತ್ತಿರುವುದು ಹಾಗೂ ಬದುಕಿನ ಮೇಲೆ ಅವರಿಗೆ ಭರವಸೆ ಇರುವುದು ಶ್ಲಾಘನೀಯ. ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಿ ಬದುಕಬೇಕೆಂದು ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳು 3000 ದಿಂದ 10 ಸಾವಿರಕ್ಕೆ ವೇತನವನ್ನು ಏರಿಸಲಾಗಿದೆ ಎಂದರು.