ಬೆಂಗಳೂರು: ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಅಶ್ವತ್ಥನಾರಾಯಣ ರಾಜೀನಾಮೆ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರದು ಹಗರಣಗಳ ಸರ್ಕಾರ. ಬರೀ ಗೃಹ ಇಲಾಖೆಯಲ್ಲಿ ಮಾತ್ರವಲ್ಲ, ಯಾವ ಯಾವ ಇಲಾಖೆಗಳಲ್ಲಿ ನೇಮಕಾತಿ ನಡೆದಿದೆ, ಅಲ್ಲೆಲ್ಲಾ ಭ್ರಷ್ಟಾಚಾರ ನಡೆದಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು 7/6/2021 ರಲ್ಲಿ ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ, ಇಲ್ಲಿ ಕೆಲಸಗಳನ್ನು ಮಾಡಲು ಆಗುತ್ತಿಲ್ಲ ಎಂದು ದೂರಿದ್ದಾರೆ. ಈ ಪತ್ರ ಬರೆದು ವರ್ಷವಾಗುತ್ತಾ ಬಂದಿದೆ, ಮೋದಿ ಅವರು ಏನು ಕ್ರಮ ಕೈಗೊಂಡರು? ನಾನು ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ ಎಂದು ಹೇಳುವ ಪ್ರಧಾನಿಗಳು ತನಿಖೆ ಮಾಡಿಸಬೇಕಿತ್ತು ಅಲ್ಲವೇ? ಎಂದು ಪ್ರಶ್ನಿಸಿದರು.
ನಾನು ತನಿಖೆಗೆ ಒತ್ತಾಯ ಮಾಡಿದರೆ ಗಾಳಿಯಲ್ಲಿ ಗುಂಡು ಹೊಡೆಯುತ್ತೇನೆ, ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎನ್ನುತ್ತಾರೆ. ಪಿ.ಎಸ್.ಐ ನೇಮಕಾತಿ ಪರೀಕ್ಷೆ ಯಾಕಪ್ಪ ರದ್ದು ಮಾಡಿದ್ದು? ಭ್ರಷ್ಟಾಚಾರ, ಅಕ್ರಮ ನಡೆದಿಲ್ಲ ಎಂದಾಗಿದ್ದರೆ ಪರೀಕ್ಷೆ ರದ್ದು ಮಾಡಿ, ಮರು ಪರೀಕ್ಷೆಗೆ ಆದೇಶ ಮಾಡುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿರುವ ಅವರು, ಪಶು ಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಪಿ.ಎಸ್.ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗಿದೆ, ಲೀಸ್ಟ್ ರದ್ದು ಮಾಡಿ ಎಂದು ಹೇಳಿದ್ದಾರೆ. ಅವರ ಪತ್ರಕ್ಕೆ ಸರ್ಕಾರ ಉತ್ತರ ಕೊಟ್ಟಿಲ್ಲ ಎಂದರು.
ಪರಿಷತ್ ಸದಸ್ಯರಾದ ಸಂಕನೂರ್, ಎಸ್. ರವಿ, ಯು.ಬಿ ವೆಂಕಟೇಶ್ ಅವರು ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಯಾವ ಅಕ್ರಮಗಳು ನಡೆದಿಲ್ಲ ಎಂದು ಆರಗ ಜ್ಞಾನೇಂದ್ರ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೀಗೆ ಉತ್ತರಿಸಿದರೆ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ? ತಮ್ಮದೇ ಪಕ್ಷದವರಿಗೆ ಈ ರೀತಿ ತಪ್ಪು ಮಾಹಿತಿ ನೀಡಿದರೆ ಹೇಗೆ? ಎಂದರು.
ಸಚಿವ ಅಶ್ವಥ್ ನಾರಾಯಣ ಅವರದ್ದು ಬೇರೆ ಭ್ರಷ್ಟಾಚಾರದ ಕಥೆಯಿದೆ. ಸರ್ಕಾರಕ್ಕೆ ಮಾನ ಮರ್ಯಾದಿ ಇದ್ದರೆ ಈ ಇಬ್ಬರೂ ಸಚಿವರನ್ನು ಸಂಪುಟದಿಂದ ಕಿತ್ತು ಬಿಸಾಕಬೇಕು ಎಂದು ಸಿಎಂ ಬೊಮ್ಮಯಿ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ನನ್ನ ಕರ್ತವ್ಯ. ಎಲ್ಲವನ್ನೂ ನೋಡಿಕೊಂಡು ಸುಮ್ಮನೆ ಕೂರಲು ಆಗಲ್ಲ ಎಂದರು.
ಈ ಸರ್ಕಾರದ ಅವಧಿಯಲ್ಲಿ ಪೊಲೀಸರೆ ಕಳ್ಳರಾಗಿದ್ದಾರೆ. ಎಡಿಜಿಪಿ ಅಮೃತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗದೆ ಇದ್ದರೆ ವರ್ಗಾವಣೆ ಮಾಡುತ್ತಿದ್ದರ? ಕೆಲವು ಇನ್ಸ್ ಪೆಕ್ಟರ್ ಗಳನ್ನು ಬಂಧಿಸಲಾಗಿದೆ. ಬೇಲಿಯೇ ಎದ್ದು ಹೊಲ ಮೇಯಲು ಆರಂಭವಾಗಿದೆ ಎಂದ ಅವರು ದೂರಿದರು.
ಸರ್ಕಾರದ ಭ್ರಷ್ಟಾಚಾರದ ಮಾಹಿತಿ ನೀಡಿದವರಿಗೆಲ್ಲ ಸಿಐಡಿ ನೋಟಿಸ್ ಕೊಟ್ಟರೆ ಹೇಗೆ? ಕ್ರಿಮಿನಲ್ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ಪಿ.ಎಸ್.ಐ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಭಾಗಿಯಾಗಿರುವುದರಿಂದ ಸಿಐಡಿ ತನಿಖೆ ಮೇಲೆ ಪ್ರಭಾವ ಬೀರುತ್ತಾರೆ. ತನಿಖೆಯನ್ನು ಪೊಲೀಸರೆ ಮಾಡಲಿ ಆದರೆ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದವರು ಪಟ್ಟು ಹಿಡಿದರು.
ಅಶ್ವಥ್ ನಾರಾಯಣ ಸಂಬಂಧಿಯನ್ನು ವಿಚಾರಣೆಗೆ ಕರೆದು ಬಿಟ್ಟು ಕಳಿಸಿದ್ದು ಯಾಕೆ? ಉಳಿದವರ ಬಂಧನವಾಗಿದೆ, ಇವರನ್ನು ಏಕೆ ಬಂಧಿಸಿಲ್ಲ? ಅಶ್ವಥ್ ನಾರಾಯಣ ಅವರ ಶಿಫಾರಸ್ಸಿನ ಮೇಲೆ ಬಿಟ್ಟು ಕಳಿಸಿದ್ದಾರೆ. ಸರ್ಕಾರದ ಹಸ್ತಕ್ಷೇಪ ಇಲ್ಲದೆ ಇಂಥ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಪೊಲೀಸರ ಜೊತೆ ರಾಜಕಾರಣಿಗಳು ಸೇರಿ ಅಕ್ರಮ ಎಸಗಲಾಗಿದೆ. ಹಾಗಾಗಿ ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.