ಬೆಂಗಳೂರು: ಒಬ್ಬರು ಬರಡು ಭೂಮಿಗೆ ಜೀವಜಲ ಹರಿಸಿದ ಆಧುನಿಕ ಭಗೀರಥ ಎಂದೇ ಗುರುತಾಗಿರುವ ‘ಗೋವಿಂದ ಬಾಬು ಪೂಜಾರಿ’, ಮತ್ತೊಬ್ಬರು ಸಾಮಾಜಿಕ ಪಿಡುಗು ಡ್ರಗ್ಸ್ ವಿರುದ್ದದ ಸಮರದಲ್ಲಿ ಜೀವ ಪಣವಾಗಿಟ್ಟು ಹೋರಾಡುತ್ತಿರುವ ಪೊಲೀಸ್ ವೀರ ವನಿತೆ ‘ರೀನಾ ಸುವರ್ಣ’. ಹೀಗೆ ದಿಗ್ಗಜ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಸಮಾಗಮವಾದಾಗ ಅಲ್ಲಿ ನೆರೆದಿದ್ದ ಜನರಲ್ಲೂ ಅದೇನೋ ಪುಳಕ.. ಈ ಅಪೂರ್ವ ಹಾಗೂ ಅನನ್ಯ ಕ್ಷಣಕ್ಕೆ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿನ ಕಾರ್ಯಕ್ರಮ ಸಾಕ್ಷಿಯಾಯಿತು. ತೀರಾ ಹಿಂದುಳಿದ ಸಮುದಾಯದಲ್ಲಿ ಹುಟ್ಟಿದ ಮಾತ್ರಕ್ಕೆ ನಾವು ನತದೃಷ್ಟರಲ್ಲ ಎಂಬುದನ್ನು ಸಾಧನೆಯ ಮೂಲಕ ನಾಡಿಗೆ ಸಾರಿದ ಈ ದಿಗ್ಗಜರನ್ನು ಸನ್ಮಾನಿಸಿದಾಗ ಪ್ರಕ್ಷಕ ಸಮೂಹದ ನಡುವಿನಿಂದ ಜೈಕಾರ ಮೊಳಗಿದಾಗ ಕಾರ್ಯಕ್ರಮ ಆಯೋಜಕರಲ್ಲೂ ಸಾರ್ಥಕತೆಯ, ಧನ್ಯತೆಯ ಭಾವ ಮೂಡಿದ್ದಂತೂ ಸತ್ಯ.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಂಗಳೂರಿನಲ್ಲಿರುವ ‘ಬಿಲ್ಲವ ಯುವವಾಹಿನಿ’ ಆಯೋಜಿಸಿದ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರ ಸಮಾಗಮವಾಯಿತು. ‘ಜನನಿ ಹೆಣ್ಣು, ಜಗದ ಕಣ್ಣು, ಮನೆ ಮಂದಿರಕ್ಕೆ ಮಂದಾರ ಪುಷ್ಪ’ ಎಂಬ ಹೆಸರಿನಲ್ಲಿ ವಾರಾಂತ್ಯದ ಭಾನುವಾರದ ರಜಾ ದಿನದಂದು ನಡೆದ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜನಸಮೂಹಕ್ಕೆ ರಸದೌತಣ ಉಣಬಡಿಸಿದರೆ, ಸಾಧಕರಿಗೆ ಸಲ್ಲಿಸಲಾದ ಪುರಸ್ಕಾರದ ಸನ್ನಿವೇಶ, ಈ ಬಡ ಸಮುದಾಯದ ಯುಜನ ಸಮೂಹಕ್ಕೆ ಮಾರ್ಗದರ್ಶಿ ಸೂತ್ರ ಎಂಬಂತಾಯಿತು.
‘ಯುವವಾಹಿನಿ ಬೆಂಗಳೂರು’ ಘಟಕದ *ಅಧ್ಯಕ್ಷ ರಾಘವೇಂದ್ರ ಪೂಜಾರಿ ಉಪಸ್ಥಿತಿಯಲ್ಲಿ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷರಾದ ವೇದಕುಮಾರ್, ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಸಾಧಕರನ್ನು ಪುರಸ್ಕರಿಸಿ ಅಭಿನಂದಿಸಿದರು. ಡಾಕ್ಟರ್ ಉಷಾ ಮೋಹನ್, ಮಕ್ಕಳ ರಕ್ಷಣೆ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ಚಿತ್ರಾ ಅಂಚನ್, ಸಹಾಯಕ ಪೊಲೀಸ್ ಆಯುಕ್ತೆ ರೀನಾ ಸುವರ್ಣ, ಮೀನಾ ಮತಿನ್, ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ರೇಷ್ಮಾ ಯತೀಶ್, ರುಕ್ಮಿಣಿ ರಾಮಕೃಷ್ಣ, ಅನಿತಾ ಕಮಾಲಾಕ್ಷ ಮೊದಲಾದ ವೀರ ವನಿತೆಯರಿಗೆ ಪ್ರಶಸ್ತಿ ನೀಡಿ ಅಭಿನಂಧಿಸಲಾಯಿತು.
ಯುವವಾಹಿನಿ ತಂಡದಿಂದ ಸಿಕ್ಕ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದ ಎಸಿಪಿ ರೀನಾ ಸುವರ್ಣ, ಶ್ರೀ ನಾರಾಯಣ ಗುರುಗಳ ತತ್ವದಂತೆ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದರು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ರೀನಾ ಸುವರ್ಣ, ಪೊಲೀಸ್ ಇಲಾಖೆಯಲ್ಲಿ ತಮಗೆ ಎದುರಾಗಿರುವ ಕಠಿಣ ಸನ್ನಿವೇಶಗಳತ್ತ ಬೆಳಕು ಚೆಲ್ಲಿದರು. ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿ, ಕೆಲಸದ ಒತ್ತಡ ಹಾಗೂ ಸಮಾಜ ಸೇವಾಕಾರ್ಯಗಳ ನಡುವಿನ ಸಮತೋಲನವನ್ನು ಕಾಪಾಡುವುದು ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಗೋವಿಂದ ಬಾಬು ಪೂಜಾರಿ, ಶೋಷಿತ ವರ್ಗದ ಆಶಾಕಿರಣದಂತೆ ದುಡಿಯುತ್ತಿರುವ ಯುವವಾಹಿನಿ ಕಾರ್ಯಕರ್ತರ ಶ್ರಮವನ್ನು ಕೊಂಡಾಡಿದರು. ಯುವಕರನ್ನು ಪ್ರೋತ್ಸಾಹಿಸಿ, ಸಂಘಟನೆಗಳಿಂದ ಇನ್ನಷ್ಟು ಯುವ ಸಮಾಜ ಬಲಯುತವಾಗಬೇಕು. ಮಹಿಳೆಯರು ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.
ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರಾಜೇಂದ್ರ ಕುಮಾರ್ ಕೆ.ವಿ., ಯುವವಾಹಿನಿಯ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಧೀರ್ ಎಸ್ ಪೂಜಾರಿ, ನಿರ್ದೇಶಕರಾದ ಕುಮಾರಿ ನೇಹಾ, ಅಶ್ವಿನಿ ಅಮೀನ್, ಕಾರ್ಯದರ್ಶಿ ಶಶಿಧರ ಕೋಟ್ಯಾನ್, ವಿಜಯ ಪ್ರಮೋದ್, ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷ ಕಿಶನ್ ಪೂಜಾರಿ, ವಿಜೇತ್ ಪೂಜಾರಿ, ಶ್ರುತಿ, ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ.. ಸೂರಿಗಾಗಿ ‘ಪೂಜಾರಿ’ ಸೇವೆ; ಅನ್ನದಾತ ಆಶ್ರಯದಾತನಾದ ಕಥೆ