ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿಂದು ಬಜೆಟ್ ಮಂಡಿಸಿದ್ದಾರೆ. ಈ ವಿಧಾನಸಭಾ ಅವಧಿಯ ಅಂತಿಮ ಬಜೆಟ್ ಇದಾಗಿದ್ದು, ಚುನಾವಣೆಗೆ ತಯಾರಿ ನಡೆದಿರುವಾಗಲೇ ಮಂಡನೆಯಾಗಿರುವ ಈ ಬಜೆಟ್ನಲ್ಲಿ ಭರವಸೆಯ ಮಹಾಮಳೆಯನ್ನೇ ಸರ್ಕಾರ ಹರಿಸಿದೆ. ಇದೇ ವೇಳೆ, ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬಗ್ಗೆಯೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಚಿತ್ತಹರಿಸಿದ್ದಾಗಿ ಹೇಳಿರುವ ಸಿಎಂ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಭರವಸೆಯನ್ನು ನೀಡಿದ್ದಾರೆ. ಆದರೆ ಹೆಚ್ಚಳದ ಪ್ರಮಾಣ ಮಾತ್ರ ನಿರಾಶಾದಾಯಕ ಎಂದು ಆಶಾ ಕಾರ್ಯಕರ್ತೆಯರ ಸಮೂಹ ಹೇಳಿದೆ.
ಆಶಾ ಕಾರ್ಯಕರ್ತೆಯರ ಸೇವೆಯನ್ನ ಗುರುತಿಸಿ ಅವರಿಗೆ ನೀಡುವ ಮಾಸಿಕ ಗೌರವಧನ 1000 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಆದರೆ ಸರ್ಕಾರ ಈ ವಿಚಾರದಲ್ಲಿ ನಿಡಿದಂತೆ ನಡೆದಿಲ್ಲ ಎಂಬ ಅಸಮಾಧಾನ ಆಶಾ ಸಹೋದರಿಯರದ್ದು.
ಸಮಾಜದ ಏಳಿಗೆಗಾಗಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಆಶಾ ಕಾರ್ಯಕರ್ತೆಯರ ಸೇವೆಯನ್ನ ಗುರುತಿಸಿ ಅವರಿಗೆ ನೀಡುವ ಮಾಸಿಕ ಗೌರವಧನ 1000 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸೇವಾಭದ್ರತೆ ಕಲ್ಪಿಸಬೇಕು, ಗೌರವಧನ ಹೆಚ್ಚಿಸಬೇಕು, ಸೂಕ್ತ ರೀತಿಯ ವಿಮಾ ಸೌಲಭ್ಯ ಕಲ್ಪಿಸಬೇಕು, ಆರೋಗ್ಯ ರಕ್ಷಣೆಗೂ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಬಹುಕಾಲದ್ದು. ಈ ಸಂಬಂಧ ಬಹುಕಾಲದಿಂದ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಸ್ಪಂಧಿಸಿಲ್ಲ ಎಂದು ಅಸನಾಧಾನ ಹೊರಹಾಕಿದ್ದಾರೆ.
ಆಶಾ ಕಾರ್ಯಕರ್ತೆಯರ ಗೌರವಧನವನ್ನು ಬೇಡಿಕೆಯಂತೆಯೇ ಹೆಚ್ಚಿಸುವುದಾಗಿ ಅಧಿಕಾರಿಗಳು ಭರವಸೆ ನೀಡುತ್ತಲೇ ಬಂದಿದ್ದಾರೆ. ಅದಾಗಿಯೂ ಕೆಲವು ದಿನಗಳ ಹಿಂದಷ್ಟೇ ಆಶಾ ಕಾರ್ಯಕರ್ತೆಯರ ಸಮ್ಮೇಳನದಲ್ಲಿ ಪಾಲ್ಗೊಂಡ ಆರೋಗ್ಯ ಸಚಿವ ಡಾ.ಸುಧಾಕರ್ ಅವರೂ ಗೌರವಧನವನ್ನು ಕನಿಷ್ಠ 2,000 ರೂಪಾಯಿ ಹೆಚ್ಚಿಸುವ ಸಾಧ್ಯತೆಗಳ ಬಗ್ಗೆ ಹೇಳಿಕೊಂಡಿದ್ದರು. ಆದರೆ ಇದೀಗ ಬಜೆಟ್ನಲ್ಲಿ ಕೇವಲ 1,000 ರೂಪಾಯಿ ಮಾತ್ರ ಹೆಚ್ಚಳವನ್ನು ಸಿಎಂ ಘೋಷಿಸಿದ್ದಾರೆ ಎಂದು ನಾಗಲಕ್ಷ್ಮೀ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆಶಾ ಕಾರ್ಯಕರ್ತೆಯರ ಇನ್ನುಳಿದ ಬೇಡಿಕೆಗಳನ್ನು ಮರೆತಿರುವ ರಾಜ್ಯ ಸರ್ಕಾರದ ವಿರುದ್ದ ಮತ್ತೆ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.