ಬೆಂಗಳೂರು: ಯಲಹಂಕ ಕ್ಷೇತ್ರದ ವ್ಯಾಪ್ತಿಯಲ್ಲಿರುವ 108ಕೆರೆಗಳನ್ನು ಅಭಿವೃದ್ಧಿ ಮಾಡಲು ಸಂಕಲ್ಪ ತೊಟ್ಟಿರುವುದಾಗಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಯಲಹಂಕ ಕ್ಷೇತ್ರದ ಅರಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಡತನಮಲೆ ಕೆರೆಯ ಸುತ್ತಮುತ್ತ ‘ನಮ್ಮಕೆರೆ ನಮ್ಮಹೊಣೆ’ ಎಂಬ ಶೀರ್ಷಿಕೆಯಡಿಯಲ್ಲಿ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರ್ಕಾರ ಆದ್ಯತೆ ಮೇರೆಗೆ ಕೆರೆಗಳ ಅಭಿವೃದ್ದಿ ಮಾಡಬೇಕಿದೆ. ನಮ್ಮ ಕ್ಷೇತ್ರದಲ್ಲಿ ಒಟ್ಟು 108ಕೆರೆಗಳನ್ನು ಅಭಿವೃದ್ದಿ ಮಾಡಲು ಯೋಜನೆ ರೂಪಿಸಲಾಗಿದೆ. ಕೆಲವೆಡೆ ಗ್ರಾ.ಪಂ ಅನುದಾನದ ಕೊರತೆ ಇದೆ. ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರದಿಂದ ಒಟ್ಟು 16ಕೆರೆಗಳ ಅಭಿವೃದ್ಧಿ ಮಾಡಲು 19ಕೋಟಿ ಅನುದಾನ ನೀಡಿದ್ದಾರೆ. ಇದರ ಜೊತೆಗೆ ಸಂಘ ಸಂಸ್ಥೆಗಳ ನೆರವು ಪಡೆದು ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.
ರಸ್ತೆ,ಚರಂಡಿ ಅಭಿವೃದ್ದಿ ಕೆಲಸದ ಜೊತೆ ಕೆರೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ. ಈ ಮೂಲಕ ಗತವೈಭವ ಮರುಕಳಿಸಲು ಸಾಧ್ಯವಾಗುತ್ತದೆ. ಇಂದು ಕಡತನಮಲೆ ಕೆರೆಯ ಸುತ್ತಲು 10 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರು 50ಗಿಡ ನೆಡಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ಕೆರೆಯ ಸುತ್ತಮುತ್ತ 10ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ. ಇಂತಹ ಕಾರ್ಯಗಳು ವ್ಯಾಪಕವಾಗಿ ಎಲ್ಲಾ ಕಡೆ ಆಗಬೇಕಿದೆ ಎಂದು ಹೇಳಿದರು.
ಬಿಜೆಪಿ ಬೆಂ.ಉತ್ತರ ಜಿಲ್ಲಾ ಕೋಶಾಧ್ಯಕ್ಷ ಹಾಗೂ ಸ್ಥಳೀಯ ಕಡತನಮಲೆ ಸತೀಶ್, ಶಾಸಕರ ಸಲಹೆಯಂತೆ ಇಂದು ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ನೂರಾರು ಸ್ಥಳಿಯರು ಸೇರಿದಂತೆ ಸಂಘಸಂಸ್ಥೆಗಳು ಕೆರೆ ಅಭಿವೃದ್ದಿಕಾರ್ಯದಲ್ಲಿ ಭಾಗಿಯಾಗಿದ್ದಾರೆ. ನಾವು ಸರ್ಕಾರವನ್ನು ದೂಷಣೆ ಮಾಡುವುದನ್ನು ಬಿಟ್ಟು, ನಮ್ಮ ಜವಾಬ್ದಾರಿ ಅರಿಯಬೇಕಿದೆ.ಈ ನಿಟ್ಟಿನಲ್ಲಿ ಕಳೆದ 8ದಿನಗಳಿಂದ ನಮ್ಮ ಸ್ವಂತ ಖರ್ಚಿನಲ್ಲಿ ಕೆರೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಹೇಳಿದರು.
ಗ್ರಾ.ಪಂ ಕೆ.ಆರ್.ತಿಮ್ಮೇಗೌಡ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದಿಬ್ಬೂರು ಜಯಣ್ಣ, ಬಿಜೆಪಿ ಯಲಹಂಕ ಗ್ರಾಮಾಂತರ ಮಂಡಲ ಅಧ್ಯಕ್ಷ ಹನುಮಯ್ಯ, ಕಡತನಮಲೆ ಗ್ರಾ.ಪಂ ಸದಸ್ಯರಾದ ಗಾಯತ್ರಮ್ಮ,ಅರಸೇಗೌಡ, ಮಾಜಿಸದಸ್ಯ ನಂಜೇಗೌಡ, ಸೇರಿ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.