ಯಾದಗಿರಿ: ಸಾವಿರಾರು ಕೋಟಿ ಲೂಟಿ ಮಾಡಿ ದೇಶ ಬಿಟ್ಟು ಹೋಗಿರುವ ‘ಮೋದಿ’ಗಳನ್ನು ಯಾಕೆ ತಡೆಯುವುದಿಲ್ಲೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಯಾದಗಿರಿ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯವರು ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗದವರಿಗೆ ಅಪಮಾನ ಮಾಡಿದ್ದಾರೆ ಎಂಬ ಹೊಸ ವಿಚಾರ ಎತ್ತಿದ್ದಾರೆ. ಸಾವಿರಾರು ಕೋಟಿ ಲೂಟಿ ಮಾಡಿ ದೇಶ ಬಿಟ್ಟು ಹೋಗಿರುವ ಮೋದಿಗಳನ್ನು ನರೇಂದ್ರ ಮೋದಿ ಅವರು ಯಾಕೆ ತಡೆಯುವುದಿಲ್ಲ ಎಂದು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ ಹೊರತು ಪ್ರಧಾನಮಂತ್ರಿಗಳನ್ನಲ್ಲ ಎಂದರು.
ಕೋಲಾರದಲ್ಲಿ 2019 ಮಾಡಿದ ಭಾಷಣದ ಬಗ್ಗೆ ಗುಜರಾತಿನ ಸೂರತ್ ನಲ್ಲಿ ದೊಡ್ಡ ವ್ಯಾಪಾರಿ ಸುಳ್ಳು ಪ್ರಕರಣ ದಾಖಲಿಸಿ ಅವರಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಈಗ ಹಿಂದುಳಿದವರಿಗೆ ಅಪಮಾನ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಆತನ ಹೆಸರು ಹೇಳಲೇ ಇಲ್ಲ. ಆದರೆ ಅಪಮಾನ ಹೇಗೆ ಆಯಿತು? ಎಂದು ಖರ್ಗೆ ಪ್ರಶ್ನಿಸಿದರು.
ಪರಿಶಿಷ್ಟರು, ಶೋಷಿತ ವರ್ಗದ ಮೇಲೆ ಸಾವಿರಾರು ವರ್ಷಗಳಿಂದ ದಬ್ಬಾಳಿಕೆ, ಅನಾಚಾರಗಳು ನಡೆಯುತ್ತಿದ್ದರೂ ಆ ಬಗ್ಗೆ ಅವರು ಕೇಳುತ್ತಿಲ್ಲ. ರಾಹುಲ್ ಗಾಂಧಿ ಅವರು ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಅವರನ್ನು ಸಂಸತ್ತಿನಿಂದ ಹೊರಗೆ ಹಾಕಬೇಕು ಎಂದು ಷಡ್ಯಂತ್ರ ಮಾಡಿದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ, ಬಡವರಿಗೆ ಕೊಟ್ಟಿರುವ ಹಕ್ಕು, ಬಡವರಿಗೆ ನೀಡಿಲಾಗಿರುವ ಹಕ್ಕು ಉಳಿಯಬೇಕು ಎಂದರು.
ಈ ವಿಚಾರವಾಗಿ ಪ್ರಮುಖ ನಾಯಕರು, ವಕೀಲರ ಜತೆ ಚರ್ಚೆ ಮಾಡಿ, ಪ್ರತಿ ರಾಜ್ಯ, ಜಿಲ್ಲೆ ಹಾಗೂ ಬ್ಲಾಕ್ ಗಳಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿವಿಗಾಗಿ ರಾಹುಲ್ ಗಾಂಧಿ ಅವರಿಗೆ ಮಾಡಲಾಗಿರುವ ಅನರ್ಹತೆ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ಹೋರಾಟ ನಿಲ್ಲುವುದಿಲ್ಲ, ಮುದುವರಿಯುತ್ತದೆ. ರಾಹುಲ್ ಗಾಂಧಿ ಯಾರಿಗೂ ಹೆದರುವುದಿಲ್ಲ. ನಾವೆಲ್ಲರೂ ಅವರ ಜತೆಗಿದ್ದೇವೆ ಎಂದು ಖರ್ಗೆ ಹೇಳಿದರು.
ನೆಹರೂ ಅವರು ನನ್ನ ಮಾತಿಗೆ ತಲೆ ಆಡಿಸುವವರು ಬೇಕಾಗಿಲ್ಲ, ಬಲಿಷ್ಠ ವಿರೋಧ ಪಕ್ಷ ಬೇಕು ಎಂದಿದ್ದರು. ಆದರೆ ಈಗ ವಿರೋಧ ಪಕ್ಷದವರ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ವಿರೋಧ ಪಕ್ಷಗಳಿಗೆ ಇಷ್ಟು ತೊಂದರೆ ನೀಡುವ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ. ಈ ದೇಶದ ಉಳಿವಿಗಾಗಿ ನೀವು ಹೋರಾಟ ಮಾಡಬೇಕು. ಇದಕ್ಕಾಗಿ ನೀವು ಧೈರ್ಯವನ್ನು ತೆಗೆದುಕೊಳ್ಳಬೇಕು. ಧೈರ್ಯವನ್ನು ನೀವು ಅಂಗಡಿಯಲ್ಲಿ ಖರೀದಿ ಮಾಡಲು ಸಾಧ್ಯವಿಲ್ಲ. ಅದನ್ನು ನಿಮ್ಮಲ್ಲಿ ನೀವೇ ತಂದುಕೊಳ್ಳಬೇಕು.
ಇಂದು ದೇಶವೇ ಮಾತನಾಡುತ್ತಿರುವ ಉದ್ಯಮಿ ಬಳಿ 2014ರಲ್ಲಿ ಕೇವಲ 3000 ಕೋಟಿ ಸಂಪತ್ತು ಇತ್ತು. 2019ರಿಂದ 2023ರವರೆಗೆ 12 ಲಕ್ಷ ಕೋಟಿ ಸಂಪತ್ತು ಹೆಚ್ಚಾಗಿದೆ. ಇಷ್ಟೋಂದು ಸಂಪತ್ತು ಹೇಗೆ ಹೆಚ್ಚಾಗಲು ಸಾಧ್ಯ? ಬ್ಯಾಂಕ್, ಎಲ್ಐಸಿಯಲ್ಲಿರುವ ನಮ್ಮ ಹಣವನನ್ನು ಸಾಲವಾಗಿ ಪಡೆದು, ನಮ್ಮದೇ ಆಸ್ತಿಗಳಾದ ಬಂದರು, ರೈಲ್ವೇ, ವಿಮಾನ ನಿಲ್ದಾಣಗಳನ್ನು ಖರೀದಿ ಮಾಡಿದ್ದಾರೆ. ಇದರ ಬಗ್ಗೆ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಅವರ ವಿರುದ್ಧ ವೈಯಕ್ತಿಕವಾಗಿ ದ್ವೇಷದಿಂದ ಹೋರಾಟ ಮಾಡುತ್ತಿಲ್ಲ. ಮೋದಿ ಅವರು ಅವರಿಗಾಗಿ ಕಾನೂನು ಬದಲಿಸುತ್ತಾ ಹೋದರು. ಬೇರೆಯವರಿಗೆ ಸಿಗದ ಸಂಪತ್ತು ಅವರಿಗೆ ಮಾತ್ರ ಸಿಗುತ್ತದೆ. ಮೋದಿ ಅವರು ವಿದೇಶ ಪ್ರವಾಸ ಹೋದರೆ ಅವರ ಜತೆ ಆತನೂ ಯಾಕೆ ಹೋಗುತ್ತಾನೆ? ಮೋದಿ ಅವರು ಪ್ರಧಾನಮಂತರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆತನ ವಿಶೇಷ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಇದರ ಬಗ್ಗೆ ಉತ್ತರ ಕೊಡಿ ಎಂದರೆ ಅದನ್ನು ನೀಡಲು ಸಿದ್ಧರಿಲ್ಲ. ಈ ವಿಚಾರವಾಗಿ ನಾವು ಮಾತನಾಡಿದರೆ ಅಧಿವೇಶನ ಮುಂದೂಡುತ್ತಿದ್ದರು. ಸರ್ಕಾರದ ಸಂಸದರೆ ಗಲಾಟೆ ಮಾಡಿದ್ದಾರೆ. ಕಲಾಪ ಮುಂದೂಡಿದ್ದಾರೆ. ಆಮೂಲಕ ಪ್ರಜಾಪ್ರಭುತ್ವವನ್ನು ಬಹಳ ಕೆಳ ಮಟ್ಟಕ್ಕೆ ತಂದಿದ್ದಾರೆ. ನಾನು 1 ಗಂಟೆ ಭಾಷಣ ಮಾಡಿದಾಗ ನನ್ನ ಅರ್ಧ ಭಾಷಣ ದಾಖಲೆಗಳಿಂದ ತೆಗೆದುಹಾಕಿದ್ದಾರೆ. ಇದು ದೇಶವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ಲೇಷಣೆ ಮಾಡಿದರು.
ಕೇಂದ್ರದಲ್ಲಿ ಬಹಳ ಕೆಟ್ಟ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರ ಸುಳ್ಳು ಹೇಳುತ್ತಾ, ದ್ವೇಷ ಕಾರುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಈ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದವರು ಅಭಿಪ್ರಾಯಪಟ್ಟರು.