KSRTCಗೂ ‘ಶಕ್ತಿ’ ಕರುಣಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: 45 ಕರ್ನಾಟಕ ಸಾರಿಗೆ, 70 ಪಲ್ಲಕ್ಕಿ ಹೊಸ ಬಸ್ಸುಗಳಿಗೆ ಚಾಲನೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕೇಂದ್ರ ಕಚೇರಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಗಮನಸೆಳೆಯಿತು. ರಾಜ್ಯದ ಮಹಿಳೆಯರಿಗೆ ‘ಶಕ್ತಿ’ ಮೂಲಕ ಉಚಿತ ಪ್ರಯಾಣ ಕಲ್ಪಿಸಿರುವ ಕೆಎಸ್ಸಾರ್ಟಿಸಿಗೆ ಈ ಮಹಿಳಾ ದಿನಾಚರಣೆ ‘ಶಕ್ತಿ’ ಹೆಚ್ಚಿಸಿತು. ಸಮಾರಂಭದಲ್ಲಿ ಪಾಲ್ಗೊಂಡ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಅವರು ನೂತನ 45 ಕರ್ನಾಟಕ ಸಾರಿಗೆ ಹಾಗೂ 70 ಪಲ್ಲಕ್ಕಿ ಬಸ್ಸುಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಕುಟುಂಬ, ಶಿಕ್ಷಣ, ವಿಜ್ಞಾನ, ಸಾಮಾಜಿಕ, ರಾಜಕೀಯ, ಆರ್ಥಿಕತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮಹತ್ತರ ಸಾಧನೆಗಳನ್ನು ಮಾಡುತ್ತಿದ್ದಾರೆ. ಮಹಿಳೆಯರ ಸಬಲೀಕರಣವು ಸಮಾಜದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದ್ದು, ಅವರಿಗೆ ಸಮಾನ ಅವಕಾಶಗಳು ಮತ್ತು ಸುರಕ್ಷಿತ ವಾತಾವರಣವನ್ನು ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಪದ್ಮಶ್ರೀ ಪುರಸ್ಕೃತರಾದ ಡಾ.ಶುಭ ರವರು ಭಾರತದ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಸಿ.ಎಸ್.ಐ.ಆರ್. ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್‌ಎಎಲ್) ನಲ್ಲಿ ದಶಕಗಳ ಕಾಲ ಕೆಲಸ ಮಾಡಿ, ಸ್ವದೇಶಿ ರನ್ವೇ ಗೋಚರತೆ ಮಾಪನ ವ್ಯವಸ್ಥೆ ʼದೃಷ್ಟಿʼ ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರು ವಿಮಾನ ನಿಲ್ದಾಣಗಳಲ್ಲಿ ಮಂಜಿನ ಸಮಯದಲ್ಲಿ ಸುರಕ್ಷಿತ ಲ್ಯಾಂಡಿಂಗ್ಗೆ ನೆರವಾಗುವ ತಂತ್ರಜ್ಞಾನವನ್ನು ರೂಪಿಸಿರುವ ಬಗ್ಗೆ ಪ್ರಶಂಸಿದರು.
ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸುಮಾರು 1.04 ಲಕ್ಷ ಸಿಬ್ಬಂದಿ ಇದ್ದು, ಇವರಲ್ಲಿ 8,956 ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ 3167 ನಿರ್ವಾಹಕರು, 2254-ತಾಂತ್ರಿಕ ಸಿಬ್ಬಂದಿಗಳು, 3535-ಆಡಳಿತ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
“ಶಕ್ತಿ ಯೋಜನೆ” ಯಲ್ಲಿ ಮಹಿಳೆಯರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಿದ್ದು, ದಿನಾಂಕ: 12ನೇ ಮಾರ್ಚ್ 2026ಕ್ಕೆ 688.83 ಕೋಟಿ ಮಹಿಳೆಯರು ಪ್ರಯಾಣಿಸಿರುತ್ತಾರೆ ನೀಡಿದರು.
ಇದೇ ಸಂದರ್ಭದಲ್ಲಿ ನಿಗಮದ 17 ವಿಭಾಗಗಳಿಂದ ತಲಾ ಒಬ್ಬರಂತೆ ಉತ್ತಮ ಕಾರ್ಯ ಸಾಧನೆ ತೋರಿದ, ತಾಂತ್ರಿಕ ಸಿಬ್ಬಂದಿ-19, ನಿರ್ವಾಹಕರು-15, ಹಾಗೂ ಕರಾಸಾ ಪೇದೆ-12, ಒಟ್ಟು 46 ಮಹಿಳಾ ಸಿಬ್ಬಂದಿಗಳನ್ನು ಪ್ರಶಸ್ತಿಯನ್ನು ಸ್ವೀಕರಿಸಿರುವುದು ಗೌರವದ ವಿಷಯವೆಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಡಾ.ವಿ.ಶುಭ ಮಾತನಾಡಿ, KSRTC ಯಲ್ಲಿ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಗಳು ಇರುವುದು ತುಂಬ ಹೆಮ್ಮೆಯ ವಿಷಯ, ಅವರನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಒಳ್ಳೆಯ ಸಂಪ್ರದಾಯ. ಮಹಿಳೆಯರು, ಪ್ರಾಮಾಣಿಕ, ಬದ್ಧತೆ ಮತ್ತು ಶ್ರದ್ಧೆ ಯಿಂದ ಕೆಲಸ ನಿರ್ವಹಿಸಿದ್ದಲ್ಲಿ ಯಾವುದೇ ಕೆಲಸವನ್ನಾದರೂ ಮಾಡಬಹುದು. ನಾವು ಕಂಡುಹಿಡಿದ ದೃಷ್ಟಿ ಎನ್ನುವ ಸಾಧನವನ್ನು 3 ತಿಂಗಳ ನಿಗದಿ ಮಾಡಿದ ಅವಧಿಯಲ್ಲಿಯೇ ಪೂರ್ಣಗೊಳಿಸಿದ್ದು, 46 ವರುಷಗಳ ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಸಲ್ಲಿಸಿದ ಅಳಿಲು ಸೇವೆ ನನ್ನದು ಎಂದು ಭಾವಿಸಿದ್ದೇನೆ. ನನಗೆ ಕೆ ಎಸ್ ಆರ್ ಟಿ ಸಿ ಗೆ ಬಂದಿದ್ದು ತುಂಬಾ ಸಂತೋಷವಾಯಿತು ಎಂದು ತಿಳಿಸಿದರು.
ಬಸ್ಸುಗಳ ಉದ್ಘಾಟನೆ:
70 ಹವಾನಿಯಂತ್ರಣ ರಹಿತ ಸ್ಲೀಪರ್ ಪಲ್ಲಕ್ಕಿ ಬಸ್ಸು ಹಾಗೂ 45 ಕರ್ನಾಟಕ ಸಾರಿಗೆ ಬಸ್ಸುಗಳಿಗೆ ಸಚಿವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.
ಮಾರ್ಗಗಳು: ಪಲ್ಲಕ್ಕಿ ಬಸ್ಸುಗಳನ್ನು ಉಡುಪಿ, ಮಂಗಳೂರು, ಮೈಸೂರು, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಆಗುಂಬೆ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಂಪಿ, ರಾಯಚೂರು, ಜಮಖಂಡಿ, ಪುತ್ತೂರು, ಕಾಣಿಯೂರು, ಕುಕ್ಕೆ ಸುಬ್ರಹ್ಮಣ್ಯ, ಕಾಸರಗೋಡು, ಮಂತ್ರಾಲಯ, ತಿರುಚಿ, ಕೊಜಿಕ್ಕೋಡ್, ಮುನ್ನಾರ್, ಪಾಂಡಿಚೇರಿ, ತಂಜಾವೂರು, ಕೊಟ್ಟಾಯಂ, ಹೈದಾರಬಾದ್, ಚೆನ್ನೈ, ಪಣಜಿ, ಮಧುರೈ, ಕುಂಭಕೋಣಂ, ಎರ್ನಾಕುಲಂಗೆ ಕಾರ್ಯಾಚರಣೆ ಮಾಡಲಾಗುತ್ತದೆ.
ನಿಗಮಕ್ಕೆ ಒಟ್ಟು 805 ಸಂಖ್ಯೆಯ ಹೊಸ ಕರ್ನಾಟಕ ಸಾರಿಗೆ ಹಾಗೂ ನಗರ/ಗ್ರಾಮಾಂತರ ಸಾರಿಗೆ ವಾಹನಗಳು ಏಪ್ರಿಲ್, ಮೇ & ಜೂನ್-2026 ಮಾಹೆಗಳಲ್ಲಿ ಸೇರ್ಪಡೆಗೊಳ್ಳಲಿದೆ.
ಮಹಿಳಾ ಸ್ನೇಹಿ ಉಪಕ್ರಮಗಳು:
- ಮಹಿಳೆಯರಿಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಲಾಗುತ್ತಿದೆ, ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕಿಯರಿಗೂ ಕೂಡ ಮಾರ್ಗ ನಿಯೋಜನೆಯಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿದೆ.
- ಕಳೆದ ಎರಡುವರೆ ವರ್ಷಗಳಲ್ಲಿ ಕರಾರಸಾ ನಿಗಮದಲ್ಲಿ 77 ವಿವಿಧ ಹುದ್ದೆಗಳಿಗೆ ಮಹಿಳೆಯರನ್ನು ಅನುಕಂಪದ ಆಧಾರದ ಮೇಲೆ (ಕಿರಿಯ ಸಹಾಯಕಿ – 44, ಕರಾಸಾ ಪೇದೆ-30 ಮತ್ತು ತಾಂತ್ರಿಕ ಸಹಾಯಕರು -02, ನಿರ್ವಾಹಕರು-1) ನೇಮಕಾತಿ ಮಾಡಿಕೊಳ್ಳಲಾಗಿದೆ.
- ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳಾ ನೌಕರರಿಗೆ ಆಗುವ ಲೈಂಗಿಕ ಕಿರುಕುಳವನ್ನು ತಡೆಯಲು Sexual Harassment of Women at Workplace (Prevention, Prohibition & Redressal) Act-2013 ರನ್ವಯ ಮಹಿಳಾ ನೌಕರರ ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದೆ, ಲಿಂಗ ಸಂವೇದಿ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.
- ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಪ್ರತಿ ಮಾಹೆಯಲ್ಲಿ ಒಂದು ದಿನದ ಋತುಚಕ್ರ ರಜೆ ಮಂಜೂರು ಮಾಡಲಾಗುತ್ತಿದೆ.
- ಮಹಿಳಾ ನೌಕರರಿಗೆ ರಾಜ್ಯ ಸರ್ಕಾರದ ಮಾದರಿಯಲ್ಲಿ 180 ದಿನಗಳ ಹೆರಿಗೆ ರಜೆಯನ್ನು ನೀಡಲಾಗುತ್ತಿದೆ.
- ಸರ್ಕಾರದ ಮಾದರಿಯಲ್ಲಿ ಕಿರಿಯ ಮಗುವಿಗೆ 18 ವರ್ಷ ತಲುಪುವವರೆಗೆ ಒಟ್ಟು ಸೇವಾವಧಿಯಲ್ಲಿ ಗರಿಷ್ಠ ಆರು ತಿಂಗಳವರೆಗೆ “ಶಿಶುಪಾಲನಾ ರಜೆ” ಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
- ಮಹಿಳಾ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಗುವಿಗೆ ಮೂರು ವರ್ಷ ತುಂಬುವವರೆಗೆ ರೂ.1250/- ಗಳನ್ನು ಮಾಸಿಕ ಶಿಶು ಪಾಲನಾ ಭತ್ಯೆ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಒಟ್ಟಾರೆ 160 ಮಹಿಳಾ ಸಿಬ್ಬಂದಿಗಳು ಪಡೆಯುತ್ತಿದ್ದಾರೆ.
- ಬುದ್ದಿಮಾಂದ್ಯ/ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ನೌಕರರಿಗೆ ಒಟ್ಟು 730 ದಿವಸಗಳ “ಶಿಶು ಪಾಲನಾ ರಜೆ”ಯನ್ನು ವೇತನಸಹಿತವಾಗಿ ನೀಡಲಾಗುತ್ತಿದೆ.
- ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ವ್ಯವಸ್ಥೆ ಕಲ್ಪಿಸಲಾಗಿದೆ.
- ವಿದ್ಯಾಚೇತನ ಯೋಜನೆ ಯಡಿ, 1747 ಹೆಣ್ಣು ಮಕ್ಕಳಿಗೆ (ಸಿಬ್ಬಂದಿಗಳ ಮಕ್ಕಳು) (2022-23 ರಿಂದ 2025-26) ರೂ.88,54,500/- ವಿದ್ಯಾರ್ಥಿ ವೇತನ ನೀಡಲಾಗಿದೆ. (ಪಿ.ಹೆಚ್.ಡಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-2, ವೈದ್ಯಕೀಯ-55, ಮಾಸ್ಟರ್ ಡಿಗ್ರಿ-139, ಡಿಗ್ರಿ-920, ಡಿಪ್ಲೋಮೋ-43)
- ”ಕೆ.ಎಸ್ಆರ್.ಟಿ.ಸಿ ಆರೋಗ್ಯ” ಯೋಜನೆ ಅಡಿಯಲ್ಲಿ 92,945 ಮಹಿಳಾ ಸಿಬ್ಬಂದಿಗಳು ಹಾಗೂ ಅವರ ಅವಲಂಬಿತರು ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಪಡೆದಿದ್ದು, ಚಿಕಿತ್ಸಾ ವೆಚ್ಚವು ಅಂದಾಜು ರೂ. 29.87 ಕೋಟಿಗಳಾಗಿರುತ್ತದೆ. (6167- ಮಹಿಳಾ ಸಿಬ್ಬಂದಿಗಳು, ಪತ್ನಿ- 44,009, ತಾಯಿ – 26,498 ಹಾಗೂ ಮಗಳು -16,271)
ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕರಾದ ಗಾಯಿತ್ರಿ ಸೇರಿದಂತೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

























































