ಬೆಂಗಳೂರು: ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ತೆರಳಿದ್ದ ನವ ವಿವಾಹಿತೆ ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ.
ಹಾಸನ ಮೂಲದ 24 ವರ್ಷದ ಭೂಮಿಕಾ ಎಂಬವರು ಗ್ಯಾಸ್ ಗೀಜರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಅನಿಲ ಸೋರಿಕೆಯಿಂದ ಉಂಟಾದ ವಿಷಕಾರಿ ವಾತಾವರಣ ದಿಂದ ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಬೇರಾರೂ ಇಲ್ಲದ ವೇಳೆ ಘಟನೆ ಸಂಭವಿಸಿದೆ. ಪತಿ ಕೃಷ್ಣಮೂರ್ತಿ ಪೀಣ್ಯಾದ ಪ್ರತಿಷ್ಠಿತ ಕಂಪನಿಯಲ್ಲಿ ಸೆಕೆಂಡ್ ಶಿಫ್ಟ್ ಕೆಲಸ ಮುಗಿಸಿ ಮನೆಗೆ ವಾಪಾಸಾದ ವೇಳೆ ಬಾಗಿಲು ತೆರೆದಿಲ್ಲ. ಸ್ನಾನದ ಕೋಣೆಯ ಕಿಟಕಿಯಿಂದ ಇಣುಕಿ ನೋಡಿದಾಗ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಬಾಗಿಲು ಮುರಿದು ನೋಡಿದಾಗ ಆಕೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ
ನೆಲಮಂಗಲ ಸುತ್ತಮುತ್ತ ಕಳೆದೆರಡು ವರ್ಷಗಳಲ್ಲಿ 10 ರಿಂದ 12 ಮಂದಿ ಇದೇ ರೀತಿ ಜೀವತೆತ್ತಿದ್ದಾರೆ ಎನ್ನಲಾಗುತ್ತಿದೆ. ಘಟನೆ ಸುದ್ದಿ ತಿಳಿದು ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.





















































