ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರ ಎಂಬ ಚರ್ಚೆಗಳು ನಡೆದಿದ್ದು ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೂ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಕುಮಾರಸ್ವಾಮಿಯವರು ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರ ಎಂಬ ಪ್ರಶ್ನೆ ಮುಂದಿಟ್ಟರು. ಇದಕ್ಕೆ ಉತ್ತರಿಸಿದ ಜೆಡಿಎಸ್ ವರಿಷ್ಠರೂ ಆದ ದೇವೇಗೌಡರು, ‘ಜೆಡಿಎಸ್‌ಗೆ ಯಾವ ಕ್ಷೇತ್ರಗಳು ಸಿಗುತ್ತವೆ ಎಂಬುದು ಸೀಟು ಹಂಚಿಕೆಯಲ್ಲಿ ನಿರ್ಧಾರವಾಗಲಿದೆ. ಕುಮಾರಸ್ವಾಮಿ ಸ್ಪರ್ಧಿಸಬೇಕೆ? ಬೇಡವೆ? ಎಂಬುದನ್ನು ಸೀಟು ಹಂಚಿಕೆ ಬಳಿಕ ನಿರ್ಧಾರ ಮಾಡಲಾಗುವುದು’ ಎಂದು ತಿಳಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಲೋಕಸಭಾ ಕ್ಷೇತ್ರಗಳ ಹಂಚಿಕೆಯ ಚರ್ಚೆ ಅಂತಿಮ ಹಂತದಲ್ಲಿದ್ದು, ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ ದೇವೇಗೌಡರು, ಕೋಲಾರ-ಮಂಡ್ಯದಿಂದ ಜೆಡಿಎಸ್ ಪಕ್ಷ ಪ್ರಚಾರ ಪ್ರಾರಂಭಿಸಲಿದೆ ಎಂದು ಪ್ರಕಟಿಸಿದರು.
ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದ್ದು, ಸಂಘಟನೆ ಚೆನ್ನಾಗಿದೆ. ಆದಷ್ಟು ಬೇಗ ಮಂಡ್ಯದಲ್ಲಿ ಪಕ್ಷದ ಸಮಾವೇಶ ಮಾಡುತ್ತೇವೆ’ ಎಂದು ಹೇಳುವ ಮೂಲಕ ಮಂಡ್ಯ ಕ್ಷೇತ್ರವನ್ನೂ ಜೆಡಿಎಸ್ ಪಡೆಯುವ ಸುಳಿವನ್ನು ಅವರು ನೀಡಿದರು.