ನವದೆಹಲಿ: ರಾಹುಲ್ ಗಾಂಧೀ ಅವರ ‘ಹಿಂದೂ’ ಟೀಕೆಯನ್ನು ಮುಂದಿಟ್ಟು ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಜ್ಯಸಭೆಯಲ್ಲೂ ವಿಪಕ್ಷಗಳ ವಿರುದ್ಧ ತೀವ್ರ ವಾಕ್ಪ್ರಹಾರ ನಡೆಸಿದರು.
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂವಿಧಾನದ ಆಶಯ ನಮಗೆ ಅಮೂಲ್ಯ. ಸಂವಿಧಾನವು ನಮಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಸಂವಿಧಾನದ ಕಾರಣದಿಂದ ಇಲ್ಲಿಗೆ ಬರಲು ನನಗೆ ಅವಕಾಶ ಸಿಕ್ಕಿತು ಎಂದರು.
ಲೋಕಸಭೆಯಲ್ಲಿ ಪ್ರಧಾನಿ ಭಾಷಣ ಸಂದರ್ಭದಲ್ಲಿ ಗದ್ದಲ ಎಬ್ಬಿಸಿದ್ದ ಪ್ರತಿಪಕ್ಷಗಳು ರಾಜ್ಯಸಭೆಯಲ್ಲೂ ಕೋಲಾಹಲ ಸೃಷ್ಟಿಸಲು ಪ್ರಯತ್ನಿಸಿದವು. ಇದರ ನಡುವೆಯೇ ಪ್ರಧಾನಿ ಮೋದಿ ತಮ್ಮ ಮಾತನ್ನು ಮುಂದುವರಿಸಿದರು. ನಮ್ಮ ಸರ್ಕಾರ ಈಗಾಗಲೇ 10 ವರ್ಷಗಳನ್ನು ಪೂರೈಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಇನ್ನೂ 20 ವರ್ಷ ನಾವು ಆಡಳಿತ ಪೂರೈಸಬೇಕಿದೆ ಎಂದರು. ಕಳೆದ 10 ವರ್ಷಗಳ ನಮ್ಮ ಕೆಲಸವನ್ನು ಜನ ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ ಎಂದ ಅವರು, ಅಪಪ್ರಚಾರವನ್ನು ದೇಶದ ಜನ ಸೋಲಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದರು.






















































