ತುಮಕೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡವು ನಾಯಕರ ಮೇಲಾಟಕ್ಕೆ ಸಾಕ್ಷಿಯಾಗುತ್ತಿದೆ. ಅಭ್ಯರ್ಥಿಗಳ ಪಟ್ಟಿ ಘೋಷಣೆಗೆ ಮುನ್ನವೇ ಪ್ರಚಾರ ಕೈಗೊಂಡಿರುವ ನಾಯಕರು ಮತದಾರರ ಮನವೊಲಿಸಲು ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವವರೂ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವುದು ಅಚ್ಚರಿಯ ಸಂಗತಿ.
ಕಲ್ಪತರು ನಾಡು ತುಮಕೂರಿನ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಣಕ್ಕಿಳಿಯಲಿದ್ದಾರೆ. ಅವರಿಗೆ ಎದುರಾಳಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಲು ನಿವೃತ್ತ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ ತಯಾರಿ ನಡೆಸಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಅವರು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಎಲ್.ಸಿ.ನಾಗರಾಜ್‌ಗೆ ಟಿಕೆಟ್ ಘೋಷಣೆಗೆ ಮುನ್ನವೇ ಮಧುಗಿರಿಯ ಬಿಜೆಪಿಯಲ್ಲಿ ಅಸಮಾಧಾನದ ಮಾತುಗಳು ಪ್ರತಿಧ್ವನಿಸಿದೆ.
ಐಎಂಎ ಸಹಿತ ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಎಲ್.ಸಿ.ನಾಗರಾಜ್ ಅವರು ಐಎಂಎ ಕೇಸ್‌ನಲ್ಲಿ ಬಂದನಕ್ಕೊಳಗಾಗಿ ಜೈಲುಪಾಲಾಗಿದ್ದರು. ಅದಾಗಲೇ ಜೆಡಿಎಸ್ ನಾಯಕರನೇಕರಿಗೆ ಆಪ್ತರಾಗಿದ್ದ ನಾಗರಾಜ್ ಆ ಪಕ್ಷದಲ್ಲೇ ಚುನಾವಣೆಗೆ ಸ್ಪರ್ಧಿಸಲು ಕಸರತ್ತು ನಡೆಸಿದ್ದರಾದರೂ ಆ ಪಕ್ಷದಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತಾಲೀಮು ನಡೆಸುತ್ತಿದ್ದಾರೆ. ಆದರೆ “ನಾ ಖಾವೂಂಗಾ ನಾ ಖಾನೆ ದೂಂಗಾ” ಎಂಬ ಪ್ರಧಾನಿಯ ಮಾತಿನ ಸೂತ್ರವನ್ನು ಅನುಸರಿಸುವ ಪಕ್ಷವು ಈ ಭ್ರಷ್ಟಾಚಾರ ಆರೋಪ ಹೊತ್ತವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವುದು ಸರಿಯೇ ಎಂಬುದು ತುಮಕೂರು ಜಿಲ್ಲೆಯ ಬಿಜೆಪಿ ನಾಯಕರ ಪ್ರಶ್ನೆ.
ಯಾರಿವರು ಎಲ್.ಸಿ.ನಾಗರಾಜ್?
ಎಲ್.ಸಿ.ನಾಗರಾಜ್ ಅವರು ರಾಜ್ಯ ಸರ್ಕಾರದ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ಹಿರಿಯ ಕೆಎಎಸ್ ಅಧಿಕಾರಿ. ಬೆಂಗಳೂರು ಉತ್ತರದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಆ ವೇಳೆ, ಐಎಂಎ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು. ಈ ಕೇಸ್ ಇನ್ನೂ ವಿಚಾರಣಾ ಹಂತದಲ್ಲಿ ಇರುವಾಗಲೇ ಸೇವೆಗೆ ಸ್ವಯಂನಿವೃತ್ತಿ ಪಡೆದ ನಾಗರಾಜ್ ಜೆಡಿಎಸ್ ಟಿಕೆಟ್ ಪಡೆದು ಚುನಾವಣೆ ಎದುರಿಸುವ ಪ್ರಯತ್ನ ನಡೆಸಿದ್ದರೆನ್ನಲಾಗಿದೆ. ಆದರೆ ಎಲ್.ಸಿ.ನಾಗರಾಜ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹೆಚ್.ಡಿ.ಕುಮಾರಸ್ವಾಮಿ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಅವರು ಬಿಜೆಪಿಯ ಬಾಗಿಲನ್ನು ಬಡಿದಿದ್ದಾರೆ ಎಂಬುದು ಮಧುಗಿರಿಯ ಕೇಸರಿ ಕಾರ್ಯಕರ್ತರ ವಿಶ್ಲೇಷಣೆ. ಆದರೆ, ಬಡವರ ಹಣ ದೋಚಿರುವ ಗಂಭೀರ ಆರೋಪದ ಐಎಂಎ ಕೇಸ್ ಇನ್ನೂ ವಿಚಾರಣಾ ಹಂತದಲ್ಲಿರುವಾಗಲೇ ಆ ಪ್ರಕರಣದ ಆರೋಪಿಯಾಗಿರುವ ನಾಗರಾಜ್ ಅವರನ್ನು ತಮ್ಮ ಪಕ್ಷದ ಹುರಿಯಾಳಾಗಿ ಕಣಕ್ಕಿಳಿಸುವುದು ಸರಿಯಲ್ಲ ಎಂಬುದು ಬಿಜೆಪಿಯ ಪ್ರಮುಖರ ಅಭಿಪ್ರಾಯ. ಹಾಗಾಗಿ ಎಲ್.ಸಿ.ನಾಗರಾಜ್ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಈ ನಡುವೆ, ಮಧುಗಿರಿ ಕ್ಷೇತ್ರದಲ್ಲಿ ಆರೆಸ್ಸೆಸ್ ಹಿನ್ನೆಲೆಯುಳ್ಳ, ಪ್ರಚಾರಕರಾಗಿದ್ದ ಎಂ.ಆರ್.ಸುರೇಶ್‌ಚಂದ್ರ ಅವರ ಹೆಸರೂ ಕೇಳಿಬರುತ್ತಿದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅತೃಪ್ತ ಕಾರ್ಯಕರ್ತರು ಈಗಾಗಲೇ ಸುರೇಶ್‌ಚಂದ್ರ ಪರ ಪ್ರಚಾರ ನಡೆಸುತ್ತಿದ್ದು ಇವರಿಗೇ ಟಿಕೆಟ್ ನೀಡಬೇಕೆಂದು ಕಲ್ಪತರು ನಾಡಿನ ಬಿಜೆಪಿ ನಾಯಕರು ಪಟ್ಟು ಹಿಡಿದಿರುವುದು ಮತ್ತೊಂದು ಬೆಳವಣಿಗೆ. ಅದಾಗಲೇ ಎಲ್.ಸಿ.ನಾಗರಾಜ್ ಹೆಸರೂ ಥಳುಕು ಹಾಕಿಕೊಂಡು ಬಿಜೆಪಿಯೊಳಗಿನ ವಿದ್ಯಮಾನಗಳಿಗೆ ರೋಚಕತೆ ತುಂಬಿದೆ.
ಎಲ್.ಸಿ.ನಾಗರಾಜ್ ಅವರು ಮಧುಗಿರಿ ಕ್ಷೇತ್ರದಲ್ಲೇ ಸ್ಪರ್ಧಿಸಲು ಕಸರತ್ತು ನಡೆಸುತ್ತಿದ್ದಾರೆ. ತನ್ನನ್ನು ಐಎಂಎ ಹಗರಣ ಆರೋಪದಲ್ಲಿ ಬಂಧಿಸಿರುವ ಐಪಿಎಸ್ ಅಧಿಕಾರಿ ಗಿರೀಶ್ ಅವರ ವಿರುದ್ದ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಗಿರೀಶ್ ಅವರ ಮಾವ ಕೆ.ಎನ್.ರಾಜಣ್ಣ ವಿರುದ್ದ ಚುನಾವಣೆಯಲ್ಲಿ ಸ್ಪರ್ಧೆ ಬಯಸಿದ್ದಾರೆ ಎಂಬುದು ಅವರ ಆಪ್ತವಲಯದಲ್ಲಿ ಕೇಳಿಬಂದಿರುವ ಮಾತುಗಳು. ಆದರೆ, ಐಎಂಎ ಹಗರಣದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ದೂರ ಇಟ್ಟಂತೆ ಬಿಜೆಪಿಯೂ ಇವರಿಂದ ಅಂತರ ಕಾಯ್ದುಕೊಳ್ಳಬಹುದೇ? ಅಥವಾ ಟಿಕೆಟ್ ಕೊಟ್ಟು “ನಾ ಖಾವೂಂಗಾ ನಾ ಖಾನೆ ದೂಂಗಾ” ಸೂತ್ರಕ್ಕೆ ತಿಲಾಂಜಲಿ ಹಾಕುತ್ತಾ ಎಂಬುದು ಬಿಜೆಪಿಯೊಳಗಿನ ಮಂದಿಯದ್ದೇ ಆದ ಕುತೂಹಲ.