‘ಚಿಲುಮೆ’ ಅವಾಂತರದಲ್ಲಿ BBMP ಆಯುಕ್ತ ತುಷಾರ್ ಗಿರಿನಾಥ್ ಪಾತ್ರದ ಬಗ್ಗೆ ಸಮಗ್ರ ತನಿಖೆಗೆ ಮಾಜಿ ಶಾಸಕ ರಮೇಶ್ ಬಾಬು ಆಗ್ರಹ. ಕೆಪಿಸಿಸಿ ನಾಯಕರೇ ನೂತನ ಸಿಎಂಗೆ ಬರೆದಿರುವ ಪತ್ರವು ರಾಜ್ಯದ ಆಡಳಿತ ವರ್ಗದಲ್ಲಿ ಕೋಲಾಹಲ ಸೃಷ್ಟಿಸಿದೆ..
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ತಂತ್ರಗಾರಿಕೆ ರೂಪಿಸಿದ್ದ ಹಿರಿಯ ವಕೀಲ ರಮೇಶ್ ಬಾಬು ಅವರು, ಭ್ರಷ್ಟಾಚಾರ ವಿರುದ್ದದ ಹೋರಾಟವನ್ನು ಬಿರುಸುಗೊಳಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಕರ್ಮಕಾಂಡಗಳ ವಿರುದ್ದದ ಕಾನೂನು ಹೋರಾಟಗಳಿಗೆ ಮುನ್ನುಡಿ ಬರೆದಿರುವ ಕೆಪಿಸಿಸಿ ವಕ್ತಾರರೂ ಆದ ರಮೇಶ್ ಬಾಬು, ಇದೀಗ ಮತದಾರರ ಪಟ್ಟಿ ಗೋಲ್‌ಮಾಲ್ ಆರೋಪದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ತಲೆದಂಡಕ್ಕೆ ಬಿಗಿಪಟ್ಟು ಹಿಡಿದಿದ್ದಾರೆ.
ಏನಿದು ಪ್ರಕರಣ?
ಬಸವರಾಜ್ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಸಹಿತ ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಹೆಸರುಗಳನ್ನು ತೆಗೆದುಹಾಕಿರುವ ಆರೋಪ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತ್ತು. ಬೆಂಗಳೂರಿನ ವಿವಿಧೆಡೆ ‘ಚಿಲುಮೆ’ ಸಂಸ್ಥೆ ಮೂಲಕ ನಡೆದಿದೆ ಎನ್ನಲಾದ ಈ ಅಕ್ರಮವನ್ನು ಬಗ್ಗೆ ಮಾಧ್ಯಮಗಳು ರಹಸ್ಯ ಕಾರ್ಯಚರಣೆ ಮೂಲಕ ಬಯಲಿಗೆಳೆದಿದ್ದರೆ, ಮಾಜಿ ಶಾಸಕರೂ ಆದ ರಮೇಶ್ ಬಾಬು ಅವರು, ಈ ಗೋಲ್‌ಮಾಲ್‌ಗೆ ಅಧಿಕಾರಿಗಳು ಯಾವ ರೀತಿ ಸಹಕಾರ ನೀಡಿದ್ದಾರೆ ಎಂಬ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದರು.
ಬೆಂಗಳೂರಿನ ‘ಚಿಲುಮೆ’ ಅಕ್ರಮದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಪಾತ್ರವಿದೆ ಎಂದು ಆರೋಪಿಸಿರುವ ರಮೇಶ್ ಬಾಬು, ಈ ಸಂಬಂದ ದಾಖಲೆಗಳೊಂದಿಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ ಸಮರ್ಪಕ ತನಿಖೆಯಾಗಿಲ್ಲ, ಅಧಿಕಾರಿಗಳ ವಿರುದ್ದ ಕ್ರಮವೂ ಆಗಿಲ್ಲ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಇದೀಗ ನೂತನ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ರಮೇಶ್ ಬಾಬು, ಮತದಾರರ ಪಟ್ಟಿ ಗೋಲ್‌ಮಲ್ ಪ್ರಕರಣದ ಹಿನ್ನೆಲೆಯಲ್ಲಿ ತುಷಾರ್ ಗಿರಿನಾಥ್ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿ BBMP ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್‌ರವರು ‘ಚಿಲುಮೆ’ ಖಾಸಗಿ ಸಂಸ್ಥೆಗೆ ಮತದಾರರ ಖಾಸಗಿ ವಿಷಯ ಸಂಗ್ರಹಣೆಗೆ ಅವಕಾಶ ನೀಡಿ ಲೋಪವೆಸಗಿದ್ದಾರೆ ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ರಮೇಶ್ ಬಾಬು ಬೊಟ್ಟುಮಾಡಿದ್ದಾರೆ. ತುಷಾರ್ ಗಿರಿನಾಥ್‌ರವರು ಈ ಕ್ರಮ ಕೈಗೊಂಡು ಬಿಬಿಎಂಪಿ ವ್ಯಾಪ್ತಿಯ 4-5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣಕರ್ತರಾಗಿದ್ದಾರೆ ಎಂದು ರಮೇಶ್ ಬಾಬು ದೂರಿದ್ದಾರೆ. ‘ಚಿಲುಮೆ’ ಸಂಸ್ಥೆಯ ಲೋಪದ ಸಂಬಂಧ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿ ವರದಿಯನ್ನು ಪಡೆದುಕೊಂಡಿದ್ದರೂ ಈ ತನಿಖೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರಾಗಿ ತುಶಾರ್ ಗಿರಿನಾಥ್‌ರವರು ಕರ್ತವ್ಯಲೋಪ ಎಸಗಿದ್ದು, ಇವರು ತಪ್ಪಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಚುನಾವಣಾ ಅಧಿಕಾರಿಯಾಗಿ ಇವರ ಕರ್ತವ್ಯಲೋಪವನ್ನು ಬೇರೆ ಅಧಿಕಾರಿಗಳ ಮೇಲೆ ವರ್ಗಾಯಿಸಲೂ ಸಾಧ್ಯವಿಲ್ಲ. ಉನ್ನತ ಮಟ್ಟದ ತನಿಖೆಯ ಮೂಲಕ ಇವರ ಅಕ್ರಮ ಬಯಲುಗೊಳಿಸುವ ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಮತ್ತೆ ಇಂತಹ ಲೋಪಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿರುತ್ತದೆ ಎಂದು ರಮೇಶ್ ಬಾಬು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿದ್ದಾರೆ.
ರಾಜ್ಯ ಸರ್ಕಾರವು ಯಾವುದೇ ಪ್ರಭಾವಕ್ಕೆ ಒಳಗಾಗದೆ ಇವರ ಮೇಲೆ ಪೂರ್ಣ ಮಟ್ಟದ ತನಿಖೆಯನ್ನು ನಡೆಸಬೇಕಾಗಿದೆ ಎಂದಿರುವ ರಮೇಶ್ ಬಾಬು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ರವರ ಮೂಲಕ ಆಗಿರುವ ಮತದಾರರ ಪಟ್ಟಿಯ ಲೋಪದ ಬಗ್ಗೆ ತನಿಖೆ ಮಾಡಲು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡುವಂತೆ ಸಿಎಂ ಅವರಿಗೆ ರಮೇಶ್ ಬಾಬು ಆಗ್ರಹಿಸಿದ್ದಾರೆ.