ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷದ ಹಾವು ಎಂದು ಬಣ್ಣಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಟೀಕಿಸುವ ಅಬ್ಬರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರನ್ನು ವಿಷಕನ್ಯೆ ಎಂದು ಕರೆದಿದ್ದಾರೆ. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಈ ಬೆಳವಣಿಗೆ ಬಗ್ಗೆ ಕೆಂಡಾಮಂಡಲರಾಗಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಕರೆದಿರುವುದು ಸರಿಯಲ್ಲ ಎಂದು ಶೋಭಾ ಕರಂದ್ಲಾಜೆ ಅವರು ಸ್ವಪಕ್ಷೀಯ ಮುಖಂಡನನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಯತ್ನಾಳ್ ಹೇಳಿಕೆ ಕುರಿತಂತೆ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಪ್ರತಿಕ್ರಿಯಿಸಿರುವ ಅವರು, ಯತ್ನಾಳ್ ಅವರ ವಿಷಕನ್ಯೆ ಹೇಳಿಕೆಯನ್ನು ಖಂಡಿಸಿದರು.
ಯತ್ನಾಳ್ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಇಂತಹ ಹೇಳಿಕೆ ಬಿಜೆಪಿ ಸಂಸ್ಕೃತಿ ಅಲ್ಲ ಎಂದು ಪ್ರತಿಕ್ರಿಯಿಸಿದ ಶೋಭಾ ಅವರು, ಬೇರೆ ಪಕ್ಷಗಳ ನಾಯಕರ ಬಗ್ಗೆ ಇಂತಹ ಹೇಳಿಕೆ ನೀಡಬಾರದು ಸಲಹೆ ಮಾಡಿದ್ದಾರೆ.