ಬೆಂಗಳೂರು: ವಿನಯ್ ಸೋಮಯ್ಯ ಸಾವಿನ ಪ್ರಕರಣ ಕುರಿತಂತೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಧನಂಜಯ್ ಆರೋಪಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು.
ತನ್ನೇರಾ ಮೈನಾ ಅವರು ಮಡಿಕೇರಿ ಸರ್ಕಲ್ ಠಾಣೆಯಲ್ಲಿ ಮಾರ್ಚ್ 5 ರಂದು ಕೊಡಗಿನ ಸಮಸ್ಯೆಗಳು ಹಾಗೂ ಸೂಚನೆಗಳು ಎನ್ನುವ ವಾಟ್ಸಪ್ ಗುಂಪಿನಲ್ಲಿ ಬರುವ ಸಂದೇಶವನ್ನು ಗಮನಿಸಿದ ತನ್ನೇರಾ ಮೈನಾ ಅವರು ರಾಜೇಂದ್ರ, ವಿಷ್ಣು ನಾಚಪ್ಪ, ವಿನಯ್ ಸೋಮಯ್ಯ ಅವರ ವಿರುದ್ದ ದೂರು ಸಲ್ಲಿಸುತ್ತಾರೆ. ವಿನಯ್ ಸೋಮಯ್ಯ ಅವರ ಕೊನೆಯ ವಾಟ್ಸಪ್ ಸಂದೇಶದ ಕೊನೆಯ ಪ್ಯಾರದಲ್ಲಿ ‘ನನ್ನ ವಿರುದ್ದ ಎಫ್ ಐಆರ್ ದಾಖಲಾದಾಗ ಬೆಂಬಲಕ್ಕೆ ನಿಂತ ಪ್ರತಾಪ್ ಸಿಂಹ, ಕೆಜೆ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಪಿ ಚರಣ್, ವಕೀಲ ರಾಕೇಶ್ ದೇವಯ್ಯ, ನಿಶಾಂತ್,ಮೋಹನ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ ಎಂದು ಗಮನಸೆಳೆದರು.
ವಿನಯ್ ಸೋಮಯ್ಯ ಅವರು ಎಲ್ಲಿಯೂ ಸಹ ನಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿಲ್ಲ. ಇವರ ಸಹೋದರನು ಸಹ ದೂರಿನಲ್ಲಿ ಎಲ್ಲಿಯೂ ಬಿಜೆಪಿ ಕಾರ್ಯಕರ್ತ ಎಂದು ಹೇಳಿಲ್ಲ . ಈತ ಬಿಜೆಪಿ ಕಾರ್ಯಕರ್ತ ಎಂದು ಹೇಳುವುದಕ್ಕೆ ಯಾವುದೇ ಆಧಾರವಿಲ್ಲ ಎಂದ ಧನಂಜಯ್, ಇಷ್ಟೇಲ್ಲಾ ಆದ ನಂತರವೂ ವಿನಯ್ ಅವರು ಏಕೆ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಕಿರುಕುಳವಾಗುತ್ತಿದೆ ಎಂದು ದೂರು ನೀಡಲಿಲ್ಲ. ಇವರ ಪಕ್ಷದ ನಾಯಕರು ನಿಯೋಗ ತೆಗೆದುಕೊಂಡು ಹೋಗಿ ಮನವಿ ನೀಡಬಹುದಾಗಿತ್ತು. ತನಿಖೆ ನಡೆಸಲು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರುಗಳು ಮನವಿ ಕೊಟ್ಟಿದ್ದರೇ ವಿನಯ್ ಸೋಮಯ್ಯ ಆತ್ಮಹತ್ಯೆ ಆಗುತ್ತಿರಲಿಲ್ಲ ಎಂದರು.
ಇದೇ ಬಿಜೆಪಿಯವರು ಪೊಲೀಸ್ ಅಧಿಕಾರಿ ಗಣಪತಿ ಅವರ ಸಾವಿನಲ್ಲಿ ರಾಜಕೀಯ ಮಾಡಿದರು. ಇದು ಜನರಿಗೆ ಅರ್ಥವಾಯಿತು. ಅದಕ್ಕೆ ಈ ಬಾರಿ ಕೊಡಗಿನಲ್ಲಿ ಇಬ್ಬರು ಕಾಂಗ್ರೆಸ್ ಸದಸ್ಯರು ಗೆಲುವು ಸಾಧಿಸಿದ್ದಾರೆ ಎಂದು ಪ್ರತಿಪಾದಿಸಿದ ಧನಂಜಯ್, ಪೊನ್ನಣ್ಣ ಬಗ್ಗೆ ಪ್ರತಾಪ್ ಸಿಂಹ ಅವರಿಗೆ ಮಾತನಾಡುವ ನೈತಿಕತೆಯಿಲ್ಲ. ಇದೇ ಚಾಳಿಯನ್ನು ಮುಂದುವರೆಸಿದರೆ ಕೆಪಿಸಿಸಿ ಕಾನೂನು ಘಟಕದಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ,ಕಾಂಗ್ರೆಸ್ ನಾಯಕ ಆಲೂರು ವೆಂಕಟೇಶ್ ಮಾತನಾಡಿ, ಬಿಜೆಪಿಗೆ ಜನಪರವಾಗಿ ಹೋರಾಟ ಮಾಡಿ ಎಂದಿಗೂ ಅಭ್ಯಾಸವಿಲ್ಲ ಹಾಗೂ ಅದರ ಬಗ್ಗೆ ತಿಳಿಯುವುದೂ ಇಲ್ಲ. ಕೇವಲ ಸಾವಿನ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಡುತ್ತದೆ ಎಂದು ಟೀಕಿಸಿದರು.
ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರ ಹೆಸರುಗಳು ಪ್ರಸ್ತಾಪವಾಗಿದೆ. ಇದರ ಸತ್ಯಾಸತ್ಯತೆ ಬಗ್ಗೆ ಜನರಿಗೆ ತಿಳಿಸಬೇಕಿದೆ ಎಂದವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿರುವ ವಿನಯ್ ಸೋಮಯ್ಯ ಎನ್ನುವ ಯುವಕನ ಸಾವಿನ ಹಿಂದೆ ಬೇರೆಯದೇ ಹುನ್ನಾರವಿದೆ. ಏಕೆಂದರೆ ಆರ್ ಟಿಐ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡುವ ಅನೇಕ ಯುವಕರು ಧೈರ್ಯದಿಂದ ಇರುತ್ತಾರೆ. ಪ್ರಾಣ ಕಳೆದುಕೊಳ್ಳುವ ಕೆಲಸಕ್ಕೆ ಇಂತಹ ಕ್ಷೇತ್ರದಲ್ಲಿ ಇರುವವರು ಕೈ ಹಾಕುವುದಿಲ್ಲ ಎಂದವರು ಪ್ರತಿಪಾದಿಸಿದರು.
ತನ್ನೇರಾ ಮೈನಾ ಎನ್ನುವ ಕೆಪಿಸಿಸಿ ಜಿಲ್ಲಾ ಸೋಶಿಯಲ್ ಮೀಡಿಯಾ ಉಸ್ತುವಾರಿಯಾದ ಅವರು ಸಾಮಾಜಿಕ ಜಾಲತಾಣದಲ್ಲಿ ಬಂದಂತಹ ಸುಳ್ಳು ಸುದ್ದಿಯನ್ನು ನೋಡಿ ಅದಕ್ಕೆ ಪ್ರತಿಕ್ರಿಯೆ ನೀಡಿರುತ್ತಾರೆ. ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಬರುವ ವಿಚಾರಗಳನ್ನು ನೋಡಿ ಪ್ರತಿಕ್ರಿಯೆ ನೀಡಬೇಕು ಎಂದು ಸೂಚನೆ ನೀಡಿರುತ್ತಾರೆ. ಅದರಂತೆ ಅವರು ಮಾಡಿದ್ದಾರೆ ಎಂದು ಸ್ಪಷ್ಟ ಪಡಿಸಿದ ಆಲೂರು ವೆಂಕಟೇಶ್, ಪೊನ್ನಣ್ಣ, ಮಂಥರ್ ಗೌಡ ಅವರಿಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಅವರ ಗಮನಕ್ಕೂ ಬಂದಿಲ್ಲ. ಈ ಸಮಬಂಧ ಮೃತ ವಿನಯ್ ಸಹೋದರ ದೂರು ನೀಡಿದ್ದು ಇದನ್ನು ಪೊಲೀಸರು ತನಿಖೆ ಮಾಡಲಿದ್ದಾರೆ ಎಂದು ತಿಳಿಸಿದರು.