ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದಾರೆ. ಬೆಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಯಲ್ಲಿ ಅವರು ಶುಕ್ರವಾರ ಸಂಜೆ ಕೊನೆಯುಸಿರೆಳೆದರು.
86 ವರ್ಷವಯಸ್ಸಿನ ಅಭಿನೇತ್ರಿ ಲೀಲಾವತಿ ಅವರು ವಯೋ ಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳಿಂದೀಚೆಗೆ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ನೆಲಮಂಗಲದ ಸೋಲದೇವನ ಹಳ್ಳಿಯಲ್ಲಿರುವ ಅವರ ನಿವಾಸದಲ್ಲೇ ಆರೈಕೆ ಮಾಡಲಾಗುತ್ತಿತ್ತು. ಬಳಿಕ ಅವರನ್ನು ಆಸ್ತ್ರೆಗೆ ದಾಖಲಿಸಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. ಕನ್ನಡ ಮಾತ್ರವಲ್ಲ, ತಮಿಳು ಮತ್ತು ತೆಲುಗು ಸಹಿತ ದಕ್ಷಿಣ ಭಾರತದ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲೇ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಈ ಪೈಕಿ ಡಾ.ರಾಜ್‌ಕುಮಾರ್ ಜೊತೆ ಅಭಿನಯಿಸಿದ್ದ ಹಲವು ಚಿತ್ರಗಳು ಲೀಲಾವತಿ ಅವರಿಗೆ ಹೆಸರನ್ನು ತಂದುಕೊಟ್ಟಿತ್ತು. ಫಿಲ್ಮ್‌ಫೇರ್ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳನ್ಬು ಅವರು ಪಡೆದಿದ್ದಾರೆ.
ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಚಿತ್ರೂದ್ಯಮ ಗಣ್ಯರು ಕಂಬನಿ ಮಿಡಿದಿದ್ದಾರೆ.







































































