ಲಕ್ನೋ: ಪಂಚ ರಾಜ್ಯಗಳ ಚುನಾವಣಾ ಸಮರ ಇದೀಗ ಕ್ಲೈಮ್ಯಾಕ್ಸ್ ಘಟ್ಟದಲ್ಲಿದೆ. ಅದರಲ್ಲೂ ಯೋಗಿಯ ನಾಡು ಉತ್ತರ ಪ್ರದೇಶದಲ್ಲಿನ ಕದನವು ರಣರೋಚಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಯೋಗಿ ಸಾಮ್ರಾಜ್ಯವನ್ನು ಮತ್ತೊಂದು ಅವಧಿಗೆ ವಿಸ್ತರಿಸಲು ಬಿಜೆಪಿ ಚಾಣಾಕ್ಷರ ತಂಡಗಳು ಹರಸಾಹಸ ನಡೆಸುತ್ತಿದ್ದು ಕರುನಾಡಿನ ಪ್ರಮುಖರೂ ಮುಂಚೂಣಿ ಪ್ರಚಾರದಲ್ಲಿದ್ದಾರೆ.
ಸಿಎಂ ಯೋಗಿಯ ಆಪ್ತ ಗೆಳೆಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಚಾರ ವೈಖರಿಯೂ ಗಮನಸೆಳೆದಿದೆ. ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದ ವಿವಿಧೆಡೆ ಮತಬೇಟೆಯಲ್ಲಿ ತೊಡಗಿರುವ ಸಿ.ಟಿ.ರವಿ ತಮ್ಮದೇ ಶೈಲಿಯಲ್ಲಿ ಮೇನಿಯಾ ಸೃಷ್ಟಿಸಿದ್ದಾರೆ.
ಹೋದಲ್ಲೆಲ್ಲಾ ಕೇಸರಿ ಯುವಪಡೆಯನ್ನು ಕ್ರಿಯಾಶೀಲಗೊಳಿಸುತ್ತಿರುವ ರವಿ, ಶುಕ್ರವಾರ ಕೂಡಾ ‘ತರಂಗ’ ಎಬ್ಬಿಸಿದ್ದಾರೆ. ಸೆಲೆಬ್ರೆಟಿಗಳ ರೀತಿ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ಅವರನ್ನು ನೋಡಲು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚುನಾವಣೆ ಘೋಷಣೆಗೂ ಮುನ್ನವೇ ಸಿಎಂ ಯೋಗಿ ಜೊತೆ ರಣತಂತ್ರ ರೂಪಿಸಿದ್ದ ರವಿ ಅದಾಗಲೇ ಯುವಕರ ತಂಡಗಳನ್ನು ರಚಿಸಿದ್ದರು. ಆ ತಂಡಗಳ ಯುವಕರ ಪಾಲಿಗೆ ಈ ಬಾರಿ ಅವರ ಉತ್ತರಪ್ರದೇಶ ಭೇಟಿ ಉತ್ಸಾಹ ತಂದಿತ್ತು.
ಶುಕ್ರವಾರ ಮುಂಜಾನೆ ಚಕಿಯಾ ವಿಧಾನಸಭಾ ಕ್ಷೇತ್ರದ ಮೌರ್ಯ ಸಮುದಾಯದ ನಾಯಕರ ಜೊತೆ ಸಭೆ ನಡೆಸಿದ ಅವರಿಗೆ ಸ್ಥಳೀಯ ಪ್ರಭಾವಿ ಮುಖಂಡರಾದ ಡಾ.ಪ್ರದೀಪ್ ಮೌರ್ಯ, ಭಗವಾನ್ ದಾಸ್ ಮೌರ್ಯ (ಪೂರ್ವ್ ಮಂಡಲ್ ಅಧ್ಯಕ್ಷ್), ಕೈಲಾಶ್ ಜೈಸ್ವಾಲ್ (ಮಂಡಲ್ ಮಹಾಮಂತ್ರಿ) ಅಭಿಷೇಕ್ ಮಿಶ್ರಾ, ಶಿವಶಂಕರ್ ಪಟೇಲ್ ಮೊದಲಾದವರು ಸಾಥ್ ನೀಡಿದರು. ಈ ಮೂಲಕ ಸಮುದಾಯದ ಮತ ಸೆಳೆಯುವ ಪ್ರಯತ್ನಕ್ಕೆ ವೇಗ ತಂದುಕೊಟ್ಟರು.
ಈ ವೇಳೆ ಮಾತನಾಡಿದ ರವಿ, ‘ಕಾನೂನು ಸುವ್ಯವಸ್ಥೆ ವಿಚಾರದಲ್ಲಿನ ಯೋಗಿಯ ನಡೆ ಮುಂದೆಯೂ ಇದೇ ರೀತಿ ಇರಬೇಕಿದೆ. ಜನರು ನೆಮ್ಮದಿಯಿಂದ ಇರಬೇಕಾದರೆ ಇದರ ಆವಶ್ಯಕತೆ ಇದೆ’ ಎಂದು ಪ್ರತಿಪಾದಿಸಿದರು. ‘ಕಾಶಿ ನಮ್ಮದಾಗಿದೆ, ಅಯೋಧ್ಯಾ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಏನಾಗಬೇಕು ಎಂದು ಯೋಚಿಸಿ ಮತ ಚಲಾಯಿಸಿ’ ಎಂದು ಅವರು ಕರೆ ನೀಡಿದ ವೈಖರಿಯೂ ಗಮನಸೆಳೆಯಿತು.
ಇದೇ ವೇಳೆ, ‘ಕೋಯಿಲೆರ್ವ’ದಲ್ಲಿರುವ ಪ್ರಸಿದ್ಧ ಹನುಮಾನ ಮಂದಿರಕ್ಕೆ ಭೇಟಿ ನೀಡಿ ಅಲ್ಲೂ ಮೌರ್ಯ ಸಮುದಾಯ ನಾಯಕರ ಜೊತೆ ಸಭೆ ನಡೆಸಿದರು. ‘ಉತ್ತರ ಪ್ರದೇಶಕ್ಕೆ ಡಬಲ್ ಇಂಜಿನ್ ಸರಕಾರ ಬೇಕಾ ಅಥವಾ ಪ್ರೈವೇಟ್ ಲಿಮಿಟೆಡ್ ಸರ್ಕಾರ ಬೇಕಾ?’ ಎಂದು ಪ್ರಶ್ನಿಸಿದ ಸಿ.ಟಿ.ರವಿ, ಪ್ರಧಾನಿ ಮೋದಿಯವರು ಯಾವುದೇ ಯೋಜನೆ ನೀಡಬೇಕಾದರೆ ಜಾತಿ, ಮತ ಕೇಳಲಿಲ್ಲ, ಎಲ್ಲರಿಗೂ ಸಮಾನ ವಾಗಿ ನೀಡಿದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್ ಎಂದು ಮಂತ್ರ ಪಠಿಸಿದ್ದಾರೆ. ಮೋದಿಯವರನ್ನು ಬಲಪಡಿಸಬೇಕಾದರೆ, ಟುಕಡೆ ಗ್ಯಾಂಗ್ ನ ಷಡ್ಯಂತ್ರ ನಾಶ ಮಾಡಬೇಕು. ‘ಬೂತ್ ಜಿತೆಗಾ ಥೋ ಚುನಾವ್ ಜಿತೆಗಾ’ ಎಂಬ ಘೋಷಣೆ ಮೊಳಗಿಸಬೇಕಿದೆ ಎಂದು ಕರೆ ನೀಡಿ ಕಾರ್ಯಕರ್ತರ ಉತ್ಸಾಹವನ್ನು ನೂರ್ಮಡಿಗೊಳಿಸಿದರು.
ಆದಿವಾಸಿಗಳು ಆರಾಧಿಸುವ ಶಬರಿ ತಾಯಿಯ ಜನ್ಮದಿನ ಸಂದರ್ಭದ ಉತ್ಸವ ಹಿನ್ನೆಲೆಯಲ್ಲಿ ಶಬರಿ ತಾಯಿಯ ದೇವಸ್ಥಾನ ಭೇಟಿ ನೀಡಿ ಅಲ್ಲೂ ಬಿಜೆಪಿ ಯುವಪಡೆಯ ಆಕರ್ಷಣೆಯ ಕೇಂದ್ರಬಿಂದುವಾದರು. ಸ್ಥಳೀಯ ನಾಯಕರ ಜೊತೆ ನೌಘಡ ಮಂಡಳ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ಕೈಗೊಂಡು ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಿದರು.
ಇನ್ನೊಂದೆಡೆ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸಹ ಪ್ರಭಾರಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿರಂತರ ಪ್ರಚಾರ ಕೈಗೊಂಡಿದ್ದಾರೆ. ಅಯೋಧ್ಯೆ ಸಹಿತ ವಿವಿಧ ನಗರಗಳಲ್ಲಿ ಅವರು ನಡೆಸಿದ ಪ್ರಚಾರದಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳಾ ಮುಖಂಡರು, ಕಾರ್ಯಕರ್ತೆಯರೂ ಭಾಗಿಯಾದರು.