ಬೆಂಗಳೂರು: ರಾಜ್ಯದ ಎಲ್ಲಾ ಧಾರ್ಮಿಕ ಕೇಂದ್ರಗಳು ಇಂದಿನಿಂದ ಭಕ್ತಾದಿಗಳ ವಿಶೇಷ ಪೂಜೆಗಳಿಗೆ ಮುಕ್ತವಾಗಿವೆ. ಲಾಕ್‌ಡೌನ್ ಕಠಿಣ ನಿಯಮಗಳು ಜಾರಿಯಲ್ಲಿದ್ದ ಕಾರಣವ ದೇಗುಲಗಳು ಬಂದ್ ಆಗಿದ್ದವು. ಅನ್‌ಲಾಕ್ ಪ್ರಕ್ರಿಯೆ ಸಂದರ್ಭದಲ್ಲಿ ದೇವಾಲಯಗಳಲ್ಲಿ ದರ್ಶನ ಭಾಗ್ಯ ಸಿಕ್ಕಿತ್ತೇ ಹೊರತು ವಿಶೇಷ ಪೂಜೆ, ಸೇವೆಗಳಿಗೆ ಅವಕಾಶ ಇರಲಿಲ್ಲ. ಇದೀಗ ದೇಗುಲಗಳಲ್ಲಿ ಪರಿಪೂರ್ಣ ಕೈಂಕರ್ಯಗಳಿಗೆ ಅವಕಾಶ ಸಿಕ್ಕಿದೆ.
ಕಟೀಲು ಕ್ಷೇತ್ರದಲ್ಲೂ ವಿಶೇಷ:
ದಕ್ಷಿಣ ಭಾರತದ ಪುಣ್ಯಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಲಾಕ್‌ಡೌನ್ ಪೂರ್ವದಲ್ಲಿ ನೆರವೇರುತ್ತಿದ್ದ ಎಲ್ಲಾ ರೀತಿಯ ವಿಶೇಷ ಪೂಜೆ, ದೇವರ ಸೇವೆಗಳಿಗೆ ಅವಕಾಶವಿದೆ ಎಂದು ದೇಗುಲದ ಹಿರಿಯ ಅರ್ಚಕರಾದ ಅನಂತ ಆಸ್ರಣ್ಣ ತಿಳಿಸಿದ್ದಾರೆ.
https://youtu.be/MksJGQbUWRo
ಸಾಮಾಜಿಕ ಅಂತರ, ಮುಂಜಾಗ್ರತಾ ಕ್ರಮ ಸಹಿತ ಕೋವಿಡ್ ಮಾರ್ಗಸೂಚಿ ಅನುಸಾರ ಭಕ್ತರು ನಿಯಮ ಪಾಲಿಸುವಂತೆ ನಿಗಾ ವಹಿಸಲಾಗುತ್ತದೆ ಎಂದು ಅನಂತ ಆಸ್ರಣ್ಣ ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಎಲ್ಲಾ ದೇವಸ್ಥಾನಗಳು, ಚರ್ಚ್, ಮಸೀದಿಗಳು, ಗುರುದ್ವಾರಗಳು ತೆರೆಯುವುದಲ್ಲದೆ ಮಕ್ಕಳಿಗೆ ಸಹ ಆಟವಾಡುವ ಮನರಂಜನಾ ಕೇಂದ್ರಗಳು ಮತ್ತು ಇತರ ಚಟುವಟಿಕೆ, ಆಟದ ಕೇಂದ್ರಗಳು ಇಂದಿನಿಂದ ತೆರೆದಿರುತ್ತವೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುವಾಗ ಕೋವಿಡ್-19 ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ರಾಜ್ಯ ಸರ್ಕಾರ ಎಚ್ಚರಿಕೆಯನ್ನೂ ನೀಡಿದೆ.
ಧಾರ್ಮಿಕ ಕೇಂದ್ರಗಳ ತೆರೆಯುವಿಕೆಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದು ಜಾತ್ರೆಗಳು, ದೇವಸ್ಥಾನ ಉತ್ಸವಗಳು, ಮೆರವಣಿಗೆಗಳು ಹಾಗೂ ಇನ್ನಿತರ ಬೃಹತ್ ಸಂಖ್ಯೆಯಲ್ಲಿ ಜನರು ಸೇರುವ ಕಾರ್ಯಕ್ರಮಗಳಿಗೆ ಅನುಮತಿ, ಅವಕಾಶವನ್ನು ನೀಡಿಲ್ಲ.