ವಿಜಯಪುರ: ಕೋವಿಡ್ ಪರಿಸ್ಥಿತಿ ಹಾಗೂ ಆರ್ಥಿಕ ದುಸ್ಥಿತಿ ಹಿನ್ನಲೆಯಲ್ಲಿ ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇಂತಹಾ ನಿರುದ್ಯೋಗಿಗಳ ನೆರವಿಗೆ ಧಾವಿಸಲು ವೇದಿಕೆಯೊಂದು ಅಖಾಡಕ್ಕೆ ಧುಮುಕಿದೆ.
ಹೋರಾಟ, ಮನವಿ, ನಿಯೋಗ ಸಹಿತ ವಿವಿಧ ಕಾರ್ಯಕ್ರಮಗಳ ಮೂಲಕ ಸರ್ಕಾರ ಮತ್ತು ಸಂಸ್ಥೆಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಈ ವೇದಿಕೆಯದ್ದಾಗಿದೆ.
ಕರ್ನಾಟಕ ರಾಜ್ಯ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ಹೆಸರಲ್ಲಿ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ವಿಜಯಪುರ ಜಿಲ್ಲಾ ಸಮಿತಿ ನೇತೃತ್ವದಲ್ಲಿಂದು ನಡೆದ ಹೋರಾಟ ಸರ್ಕಾರದ ಗಮನಸೆಳೆಯಿತು.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಂಘಟನೆಯ ಮುಖಂಡ ಸಿದ್ದಲಿಂಗ ಬಾಗೇವಾಡಿ ಅವರು, ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳಲು ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೂಡಲೇ ನೇಮಕಾತಿ ನಡೆಸುವಂತೆ ಒತ್ತಾಯಿಸಲಾಯಿತು ಎಂದು ತಿಳಿಸಿದರು. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಮೂಲಕ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಕೇಲವೇ ಹುದ್ದೆಗಳಿಗೆ ವರ್ಷಾನುಗಟ್ಟಲೇ ನೇಮಕಾತಿ ಪ್ರಕ್ರಿಯೆ ನಡೆಸುವ ಕೆಪಿಎಸ್ಸಿಯಲ್ಲಿ ವ್ಯಾಪಕ ಬ್ರಷ್ಟಾಚಾರ ನಡೆದಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ. ಯುವಜನರಿಗೆ ಉದ್ಯೋಗ ಕೊಡಬೇಕು. ಇಲ್ಲವೇ ಅಧಿಕಾರ ಬಿಟ್ಟು ತೊಲಗಬೇಕು” ಎಂದು ನಿರುದ್ಯೋಗಿ ಯುವಜನ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದ್ದಾರೆ.
‘ಕ್ವಿಟ್ ಇಂಡಿಯಾ ಚಳುವಳಿ’ಯ ವಾರ್ಷಿಕೋತ್ಸವದ ದಿನವಾದ ಆಗಷ್ಟ್ 9ರಂದು ಅಖಿಲ ಭಾರತ ಯುವಜನ ಹೋರಾಟ ಸಮಿತಿಯ ಕರೆಯ ಮೇರೆಗೆ ‘ಅಖಿಲ ಭಾರತ ಬೇಡಿಕೆ ದಿನ’ದ ಅಂಗವಾಗಿ ವಿಜಯಪುರದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2018-19ರ ಸಾಲಿನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬೆಂಗಳೂರಿನ ಪೀಣ್ಯ ಕೈಗಾರಿಕಾವಲಯ ಒಂದರಲ್ಲೆ 12 ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ, ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಪಾಲಾದರು. ಇಂತಹ ಪರಿಸ್ಥಿತಿಯಲ್ಲಿ ಬಂದೆರಗಿದ ಕೋವಿಡ್-19 ಮಹಾಮಾರಿಯನ್ನು ತಡೆಯಲೆಂದು ದಿಢೀರನೆ ಹೇರಲಾದ ಲಾಕ್ಡೌನ್‍ನಿಂದಾಗಿ ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡರು ಎಂದು ಹೇಳಿದರು.
ಸರ್ಕಾರಗಳ ಆರ್ಥಿಕ ನೀತಿಯಿಂದಾಗಿ ಅಗತ್ಯ ವಸ್ತುಗಳ ಬೆಲೆಏರಿಕೆ ಜನಜೀವನವನ್ನು ಹೈರಾಣಾಗಿಸಿದೆ. ಇಡೀ ದೇಶದಲ್ಲಿ ನಿರುದ್ಯೋಗದಿಂದ ಬೇಸತ್ತು ಖಿನ್ನತೆಗೆ ಒಳಗಾಗಿ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿ ಕರ್ನಾಟಕಕ್ಕೆ ಮೊದಲನೇ ಸ್ಥಾನ ಎಂದವರು ಹೇಳಿದರು.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ 3ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಬಿದ್ದಿವೆ. ಖಾಲಿ ಆಗುತ್ತಲೇ ಇವೆ. ಶಿಕ್ಷಣ, ಆರೋಗ್ಯ, ವಸತಿ, ಇಂಧನ ಸೇರಿದಂತೆ ಮೂಲಭೂತ ವಲಯಗಳಲ್ಲಿ ಅವಶ್ಯಕ ಸಂಖ್ಯೆಯಲ್ಲಿ ನೇಮಕಾತಿಗಳು ನಡೆದಿಲ್ಲ. ಖಾಲಿಯಿರುವ ಹುದ್ದೆಗಳ ಭರ್ತಿಗೆ ಯಾವುದೇ ಪ್ರಯತ್ನ ಮಾಡದೇ, ದಿನಗೂಲಿ, ಗುತ್ತಿಗೆ, ಅರೆ-ಗುತ್ತಿಗೆ, ಅತಿಥಿ ಮುಂತಾದ ಹೆಸರಿನಲ್ಲಿ ಪುಡಿಗಾಸಿಗೆ ದುಡಿಸಿಕೊಳ್ಳುತ್ತಿದ್ದಾರೆ. ಅರ್ಜಿ ಶುಲ್ಕದ ಮೂಲಕ ಹಣ ಸಂಗ್ರಹಿಸಲು ಅಲ್ಪಸ್ವಲ್ಪ ನೇಮಕಾತಿಯ ಪ್ರಹಸನ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ದೂರಿದರು.
ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಜಿಲ್ಲಾ ನಾಯಕರಾದ ಎಸ್.ಎಸ್. ಗೌಡರ್ ಅವರು ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಬಿಎಸ್ಸಿ, ನರ್ಸಿಂಗ್, ಪ್ಯಾರಾಮೆಡಿಕಲ್, ಫಾರ್ಮಸಿ, ಕೋರ್ಸ್ ಮುಗಿಸಿ, ಗುತ್ತಿಗೆ ಹೊರಗುತ್ತಿಗೆ ಆಧಾರದಲ್ಲಿ ಪುಡಿಗಾಸಿಗೆ ದುಡಿಯುತ್ತಿದ್ದಾರೆ. ಕೊರೋನ ಅವಧಿಯಲ್ಲಂತೂ ಇವರು ಜೀವಪಣಕ್ಕಿಟ್ಟು ದುಡಿದಿದ್ದಾರೆ. ಇವರ ಸೇವೆಯು ಯಾವ ಕಾರಣಕ್ಕೂ ಮರೆಯುವಂತದ್ದಲ್ಲ ಎಂದರು.