ಲಂಡನ್: ಲಂಡನ್ ಪಾರ್ಲಿಮೆಂಟ್ ಬಳಿಯ ಜಗಜ್ಯೋತಿ ಬಸವಣ್ಣ ಪ್ರತಿಮೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೌರವ ಸಲ್ಲಿಸಿದರು.
ಲಂಡನ್ ಪ್ರವಾಸದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಕರ್ನಾಟಕ ಮೂಲದ ಡಾ.ನೀರಜ್ ಪಾಟೀಲ್‌ರನ್ನು ಭೇಟಿಯಾದರು. ಬಳಿಕ ಥೇಮ್ಸ್ ನದಿಯ ದಡದಲ್ಲಿ ಸ್ಥಾಪಿತವಾಗಿರುವ ಬಸವೇಶ್ವರ ಪ್ರತಿಮೆಯಿರುವ ಸ್ಥಳಕ್ಕೆ ಭೇಟಿ ನೀಡಿದರು. ಬಸವಣ್ಣರಿಗೆ ಭಕ್ತಿ ಸಮರ್ಪಿಸಿದರು. ಯುಕೆಯ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮೂಲಕ ಸ್ಥಾಪಿತವಾಗಿರುವ ಈ ಮೂರ್ತಿಯನ್ನು ಕಂಡು ರಾಹುಲ್ ಪುಳಕಿತರಾದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಜಗತ್ತಿಗೆ ಮಾನವೀಯತೆಯ ಸಂದೇಶ ಕೊಟ್ಟಿರುವವರು ಮಹಾಮಾನವತಾವಾದಿ ಜಗಜ್ಯೋತಿ ಬಸವಣ್ಣರ ಪ್ರತಿಮೆಯನ್ನು ಆಂಗ್ಲರ ನಾಡಿನಲ್ಲಿ ಸ್ಥಾಪಿಸಿರುವ ಯುಕೆಯ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಪ್ರಯತ್ನ ಅಸಾಧಾರಣವಾದುದು ಎಂದರು. ಲಂಡನ್‌ಗೆ ಭೇಟಿ ನೀಡುವ ಪ್ರತೀಯೊಬ್ಬ ಭಾರತೀಯನಿಗೆ ಈ ಬಸವೇಶ್ವರ ಪ್ರತಿಮೆ ನೋಡುವುದು ಹೆಮ್ಮೆಯ ಸಂಗತಿ ಎಂದ ರಾಹುಲ್ ಗಾಂಧಿ, ಈ ಪ್ರತಿಮೆ ಸ್ಥಾಪನೆಯ ಹಿಂದಿನ ಶ್ರಮಿಕರ ಪ್ರಯತ್ನವನ್ನು ಕೊಂಡಾಡಿದರು.
ಡಾ.ನೀರಜ್ ಪಾಟೀಲ್ ಸಹಿತ ಯುಕೆಯ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಪ್ರಮುಖರನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.