ಉಡುಪಿ: ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ, ಬಡಜನರ ಪಾಲಿಗೆ ಆಶಾಕಿರಣದಂತಿರುವ ಸಾಮಾಜಿಕ ಹರಿಕಾರ ಡಾ.ಗೋವಿಂದ ಬಾಬು ಪೂಜಾರಿಯವರು ಕರಾವಳಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಯತ್ತ ಚಿತ್ತ ಹರಿಸಿದ್ದಾರೆ. ಉಡುಪಿ ಜಿಲ್ಲೆ ಬಿಜೂರಿನ ಕೊಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿ ನಾಡಿನ ಗಮನಸೆಳೆದಿದ್ದಾರೆ.

ಗಣ್ಯರ ಉಪಸ್ಥಿತಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಈ ಸರ್ಕಾರಿ ಶಾಲೆಯ ಉನ್ನತ ಮಟ್ಟದ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರೂ ಆದ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ, ಸರ್ಕಾರಿ ಶಾಲಾ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕಿದೆ. ಈ ಉದ್ದೇಶದಿಂದ ಸಾಕಷ್ಟು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಹಾಗೂ ಇತರೆ ಕೊಡುಗೆ ನೀಡುತ್ತಾ ಬರುತ್ತಿದ್ದೇವೆ. ಅದರಂತೆ ಕೊಡೇರಿ ಸರ್ಕಾರಿ ಶಾಲೆಗೆ ಉನ್ನತ ಮಟ್ಟದ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದ್ದೇವೆ ಎಂದು ತಿಳಿಸಿದರು.

ಸ್ಮಾರ್ಟ್ ಕ್ಲಾಸ್ ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ದೇಶದ ಹೆಮ್ಮೆಯ ಪ್ರಜೆಗಳಾಗಿ ಹೊರಬರಲಿ ಎಂದು ಹಾರೈಸಿದ ಅವರು, ಶಿಕ್ಷಕ ವೃಂದ, SDMC ಹಾಗೂ ಹಳೆ ವಿದ್ಯಾರ್ಥಿಗಳು ಮೂರು ಮೂರ್ತಿಗಳ ಹಾಗೆ ಸೇರಿ ಕಾರ್ಯ ನಿರ್ವಹಿಸಿದರೆ ಶಾಲಾ ಅಭಿವೃದ್ಧಿ ಸುಲಭ ಸಾಧ್ಯ ಎಂದು ಅಭಿಪ್ರಾಯಪಟ್ಟರು. ತಾನು ಕಲಿತ ಬಿಜೂರು ಶಾಲೆಯನ್ನು ಅಭಿವೃದ್ಧಿ ಮಾಡಲು ದತ್ತು ಪಡೆದಿದ್ದೇನೆ ಎಂದು ಅವರು ಸಂತಸ ಹಂಚಿಕೊಂಡರು.

ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದ ಗೋವಿಂದ ಬಾಬು ಪೂಜಾರಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಂಬದಕೋಣೆ ಸಂದೀಪನ್ ಆಂಗ್ಲ ಮಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ ಮಾತನಾಡಿ, ಶ್ರೀಮಂತರು ತುಂಬಾ ಜನರಿರಬಹುದು ಆದರೆ ದಾನ ಮಾಡುವ ಮನಸ್ಸುಕೆಲವರಿಗೆ ಮಾತ್ರ ಇದೆ. ಶಿಕ್ಷಣ, ಆರೋಗ್ಯ, ವಸತಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಾಕಷ್ಟು ಸಹಾಯ ಮಾಡಿದ ಡಾ.ಗೋವಿಂದ ಪೂಜಾರಿಯವರ ಕಾರ್ಯ ಶ್ಲಾಘನಿಯ ಎಂದರು.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಆನಂದ ಪೂಜಾರಿ ಮಾತನಾಡಿ, ಶಾಲಾ ಹಳೆ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳ ಸಂಘದ ಮತ್ತು ದಾನಿಗಳ ಮತ್ತು ಪೋಷಕರ ನೆರವಿನಿಂದ ಈಗಾಗಲೇ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಆಂಗ್ಲ ಮಧ್ಯಮದ ಟೆಕ್ಸ್ಟ್ ಬುಕ್, ID ಕಾರ್ಡ್ ವಿತರಣೆ, ವಿದ್ಯಾರ್ಥಿಗಳಿಗೆ ಉಚಿತ ವಾಹನ ವ್ಯವಸ್ಥೆ, 4ಜನ ಗೌರವ ಶಿಕ್ಷಕರ ನೇಮಕ, ಆಯಾ ನೇಮಕ, CC ಟಿವಿ ಅಳವಡಿಕೆ,ಕಂಪ್ಯೂಟರ್ ಕ್ಲಾಸ್, ಇದೀಗ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಿದ್ದು ಮುಂದಿನ ದಿನ ಸುಸಜ್ಜಿತ ವಾಚನಾಲಾಯ, ಪ್ರಯೋಗಾಲಯ, ರಚನೆ ನಮ್ಮ ಮುಂದಿದ್ದು ಅದನ್ನು ಕೂಡ ನಿರ್ಮಿಸುವ ಜವಾಬ್ದಾರಿ ಇದೆ ಎಂದರು.

ಮುಖ್ಯೋಪಾಧ್ಯಾಯರಾದ ಶ್ಯಾಮಲಾ ರಾವ್, ದಾನಿಗಳಾದ ವೆಂಕಪ್ಪಯ್ಯ ಕಾರಂತ್ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಖಾರ್ವಿ, ಹರಿದಾಸ್ ಪ್ರಭು, ಪತ್ರಕರ್ತ ರಾಜು ಕೊಡೇರಿ, ಯವರು ಉಪಸ್ಥಿತರಿದ್ದರು. ದೇವರಾಜ್ ಅಳೊಳ್ಳಿ, ರಾಮ ಪೂಜಾರಿ, ಮಂಜುನಾಥ್ ಖಾರ್ವಿ, ಚಂದ್ರ ಪೂಜಾರಿ, ಸುಧೀರ್ ಕಾಡ್ಕೇರಿ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.


























































