ಕಾಂಗ್ರೆಸ್ ಪಕ್ಷವು ಬಿಜೆಪಿಯ ಬಿ ಟೀಮೋ ಅಥವಾ ಸಿ ಟೀಮೋ? : ಹೆಚ್.ಡಿ.ಕುಮಾರಸ್ವಾಮಿ ನೇರ ಪ್ರಶ್ನೆ.. ತುಮಕೂರಿನಲ್ಲಿ ದೇವೇಗೌಡರ ಸೋಲಿಗೆ ಸೇಡು ತೀರಿಸಿಕೊಳ್ಳುತ್ತೇವೆ.. ಹೆಚ್ಡಿಕೆ ಸಂಕಲ್ಪ..
ಬೆಂಗಳೂರು: ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು ಕುಹಕ ಆಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈಗ ಬಿಜೆಪಿಯ ಬಿ ಟೀಮ್ ಹಾಗೂ ಸಿ ಟೀಮ್ ಯಾವ ಪಕ್ಷ ಎನ್ನುವುದು ಜನರಿಗೆ ಈಗ ಚೆನ್ನಾಗಿ ಅರ್ಥವಾಗಿದೆ ಎಂದಿದ್ದಾರೆ.
ದೇವನಹಳ್ಳಿಯಲ್ಲಿ ಮಂಗಳವಾರ ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ರಮೇಶ್ ಗೌಡ ಅವರು ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿಗಳು ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ನಿಜವಾದ ಎ ಟೀಮ್, ಬಿ ಟೀಮ್ ಮತ್ತು ಸಿ ಟೀಮ್ ಯಾವುದು ಎನ್ನುವುದು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಗೊತ್ತಾಗುತ್ತದೆ. ಹಾಸನದಲ್ಲಿ ತಂದೆ (ಎ.ಮಂಜು) ಬಿಜೆಪಿ ಅಭ್ಯರ್ಥಿ. ಕೊಡಗಿನಲ್ಲಿ ಅವರ ಪುತ್ರನೇ ಕಾಂಗ್ರೆಸ್ ಪಕ್ಷದ ಉಮೇದುವಾರ. ಬಿಜೆಪಿ ಸರಕಾರದಲ್ಲಿ ಸಚಿವರಿಗೆ ಪಿಎ ಆಗಿದ್ದ ವ್ಯಕ್ತಿ ಈಗ ಮಂಡ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ. ಇದು ಏನನ್ನು ಸೂಚಿಸುತ್ತದೆ? ಎಂದು ಅವರು ಪ್ರಶ್ನೆ ಮಾಡಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಮುಖಂಡನನ್ನು ಬಿಜೆಪಿಗೆ ಕಳಿಸಿ ಅಭ್ಯರ್ಥಿ ಮಾಡಿತ್ತು. ಈಗ ಅದೇ ಬಿಜೆಪಿಯು ತನ್ನ ನಾಯಕನ ಮಗನನ್ನು ಕಾಂಗ್ರೆಸ್ ಪಕ್ಷಕ್ಕೆ ಕಳಿಸಿ ಕೊಡಗಿನ ಅಭ್ಯರ್ಥಿ ಮಾಡಿದೆ. ಇದು ರಾಷ್ಟ್ರೀಯ ಪಕ್ಷಗಳ ಅಡ್ಜೆಸ್ ಮೆಂಟ್ ರಾಜಕೀಯ ಎಂದು ಅವರು ಟೀಕಿಸಿದರು.
ನಾವು ಏಳು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೇವೆ. ಆ ಪೈಕಿ ಕೊನೆಪಕ್ಷ ಆರು ಕಡೆಯಾದರೂ ಗೆಲ್ಲುತ್ತೇವೆ ಎಂದ ಅವರು, ಈಗ ನಮ್ಮ ಪಕ್ಷ ಕಷ್ಟದ ಪರಿಸ್ಥಿತಿಯಲ್ಲಿದೆ. ಹೀಗಾಗಿ ನಾವು ಕಣಕ್ಕಿಳಿದಿರುವ ಕಡೆ ಗೆಲ್ಲಲೇಬೇಕು. ಅದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.
ಮೈತ್ರಿ ಸರಕಾರವನ್ನು ಪತನ ಮಾಡಿದ ನಂತರ ನಮ್ಮ ಪಕ್ಷವನ್ನು ಮುಗಿಸಲು ಕೆಲವರು ಹೊಂಚು ಹಾಕಿ ಕೂತಿದ್ದಾರೆ. ನಮ್ಮ ನಾಯಕರ ಬ್ರೈನ್ ವಾಶ್ ಮಾಡಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಷತ್ ಚುನಾವಣೆ ಬಂದಿದೆ. ನಾವು ಕಾರ್ಯಕರ್ತರನ್ನು ನಂಬಿ ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ಪಕ್ಷದಿಂದ ಬೆಳೆದವರು ಪಕ್ಷದ ಬೆನ್ನು ಇರಿದರು. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದರು. ಕಾಂಗ್ರೆಸ್ ಪಕ್ಷದ ನಾಯಕರೇ ಕುತಂತ್ರ ನಡೆಸಿ ಮಾಜಿ ಪ್ರಧಾನಿಗಳ ಸೋಲಿಗೆ ಕಾರಣರಾದರು ಎಂದು ಅವರು ಕಿಡಿ ಕಾರಿದರು.
ತಡರಾತ್ರಿ 1.30ಕ್ಕೆ ಅಭ್ಯರ್ಥಿಗಳನ್ನ ಅಂತಿಮ ಮಾಡಲಾಗಿದೆ. ನಮ್ಮ ಪಕ್ಷದ ಶಕ್ತಿಗೆ ತಕ್ಕಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದ ಕುಮಾರಸ್ವಾಮಿ, ಬಿಜೆಪಿಗೆ ಅನುಕೂಲ ಮಾಡಿಕೊಡಲು ದೇವೇಗೌಡರನ್ನು ಕಾಂಗ್ರೆಸ್ ನಾಯಕರು ತುಮಕೂರಿನಲ್ಲಿ ಸೋಲಿಸಿದರು. ಯಾವ ಕುತಂತ್ರಕ್ಕೆ ಅಂದು ನಾವು ಬಲಿಯಾದೇವೂ ಅದನ್ನೆ ಈಗ ತೋರಿಸುತ್ತೇವೆ. ಪರಿಷತ್ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ನೇರ ಸವಾಲು ಹಾಕಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾವು ನೂರಕ್ಕೆ ನೂರು ಪರ್ಸೆಂಟ್ ಗೆಲ್ಲುತ್ತೇವೆ. ಇದರ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಕುಮಾರಸ್ವಾಮಿ ಹೇಳಿದರು.