‘ಶಕ್ತಿ’ಯಿಂದ ಸಾರಿಗೆ ಸಂಸ್ಥೆಗಳು ಬಲಿಷ್ಠವಾಗಿವೆ, ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ 30% ಹೆಚ್ಚಿದೆ, ಹಾಗಾಗಿ ನಿಮ್ಮ ಲೆಕ್ಕ ಪಕ್ಕಾ ಇಲ್ಲ’ ಎಂದು ಪ್ರಧಾನಿಗೆ ಎದಿರೇಟು ಕೊಟ್ಟ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ
ಬೆಂಗಳೂರು: ‘ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಗ್ಯಾರೆಂಟಿ ಯೋಜನೆಯಿಂದಾಗಿ ಮೆಟ್ಟೋ ರೈಲು ಆದಾಯ ಕಡಿಮೆಯಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಕ್ಷೇಪಿಸಿದ್ದಾರೆ. ಯಾವುದೇ ವಿಚಾರಕ್ಕೂ ಅಂಕಿ ಅಂಶಗಳೊಂದಿಗೆ ಸ್ಪಷ್ಟನೆ ನೀಡುವ ರಾಮಲಿಂಗ ರೆಡ್ಡಿ ಅವರು, ಪ್ರಧಾನಿ ಹೇಳಿಕೆಗೂ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಶಕ್ತಿ’ಯಿಂದ ಸಾರಿಗೆ ಸಂಸ್ಥೆಗಳು ಬಲಿಷ್ಠವಾಗಿವೆ, ಜೊತೆಗೆ ‘ಮೆಟ್ರೋ’ ಪ್ರಯಾಣಿಕರ ಸಂಖ್ಯೆಯೂ 30% ಹೆಚ್ಚಿದೆ, ಹಾಗಾಗಿ ನಿಮ್ಮ ಲೆಕ್ಕ ಪಕ್ಕಾ ಇಲ್ಲ ಎಂದು ಎದಿರೇಟು ಕೊಟ್ಟಿದ್ದಾರೆ
ಮಾಧ್ಯಮ ಹೇಳಿಕೆ ಮೂಲಕ ಪ್ರಧಾನಿ ಹೇಳಿಕೆಗೆ ಸಾಲು ಸಾಲು ಸ್ಪಷ್ಟನೆ ನೀಡಿರುವ ಸಚಿವ ರಾಮಲಿಂಗ ರೆಡ್ಡಿ ‘ಶಕ್ತಿ’ ಯೋಜನೆಯಿಂದ METROಗೆ ಕುತ್ತು ಎಂಬ ಪ್ರಧಾನ ಮಂತ್ರಿಗಳಾದ ಮೋದಿಯವರ ಹೇಳಿಕೆ ಅವೈಜ್ಞಾನಿಕ ಎಂದಿದ್ದಾರೆ
ಇತ್ತೀಚೆಗೆ ಪ್ರಧಾನಮಂತ್ರಿಗಳು, ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವುದು ಸರಿಯಲ್ಲ ಇದರಿಂದ METROಗೆ ಕುತ್ತು ಬರುತ್ತದೆ ಎಂಬುದಾಗಿ ಹೇಳಿಕೆ ನೀಡಿದ್ದರು, ಅವರು ಅಂಕಿ-ಅಂಶ ತಿಳಿಯದೆ ಹೇಳಿಕೆ ನೀಡಿದ್ದಾರೆ ಎಂದು ರಾಮಲಿಂಗ ರೆಡ್ಡಿ ಟೀಕಿಸಿದರು.
2023ಕ್ಕೆ ಹೋಲಿಸಿದರೆ 2024ರಲ್ಲಿ ಒಂದು ತಿಂಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಸರಾಸರಿ 35 ಲಕ್ಷ ಏರಿಕೆ ಮತ್ತು ಆದಾಯದಲ್ಲಿ ರೂ. 1.10 ಕೋಟಿ ಏರಿಕೆ ಕಂಡಿದೆ ಎಙದಿರುವ ಸಚಿವರು, ಈ ಅಂಕಿ-ಅಂಶಗಳಿಂದ ಶಕ್ತಿ ಯೋಜನೆಯಿಂದ METROಗೆ ಯಾವ ರೀತಿಯಿಂದಲೂ ಧಕ್ಕೆ ಆಗಿಲ್ಲ, ಬದಲಿಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದಲ್ಲಿ ಗಣನೀಯ ಹೆಚ್ಚಳವಾಗಿರುವುದು ಕಂಡುಬರುತ್ತದೆ. ಅಂಕಿ ಅಂಶಗಳು ಹೀಗಿರುವಾಗ ಉಚಿತ ಪ್ರಯಾಣ ಯೋಜನೆಯಿಂದ ಮೆಟ್ರೋಗೆ ಹೇಗೆ ಧಕ್ಕೆಯಾಗಿದೆ ಎಂಬುದನ್ನು ಪ್ರಧಾನಿಯವರೇ ವಿವರಿಸಬೇಕು ಎಂದು ರಾಮಲಿಂಗ ರೆಡ್ಡಿ ಅವರು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಹಾಗೂ ಅತ್ಯಂತ ಯಶಸ್ವಿಯಾಗಿ ಜಾರಿಯಾಗಿರುವ ಶಕ್ತಿ ಯೋಜನೆಯನ್ನು ದೂಷಿಸುವ ಇರಾದೆಯೇ?
ಅಥವಾ ಮಾಹಿತಿ ಕೊರತೆಯೋ? ತಿಳಿಯದಾಗಿದೆ ಎಂದು ತಮ್ಮದೇ ದಾಟಿಯಲ್ಲಿ ಟೀಕಿಸಿದ ಸಚಿವರು, ಶಕ್ತಿಯೋಜನೆ ನಂತರ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಹಾಗೂ ಮಹಿಳೆಯರ ಸಬಲೀಕರಣ ಮಹತ್ವದ ಯೋಜನೆಯನ್ನು ಪ್ರಧಾನಮಂತ್ರಿಯಾದವರು ಈ ರೀತಿಯಾಗಿ ಟೀಕಿಸುವುದು ಸಾಧುವಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಬಲಿಷ್ಠವಾಗುತ್ತಿವೆ. ಹೊಸ ಹೊಸ ಬಸ್ಸುಗಳ ಸೇರ್ಪಡೆ , ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ಹಾಗೂ ದೇಶ ವಿದೇಶಗಳ ಮಾಧ್ಯಮಗಳಲ್ಲಿಯೂ,
ಈ ಯೋಜನೆ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿರುವುದು ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟಾರೆಯಾಗಿ ಶಕ್ತಿ ಯೋಜನೆಯು ಪರಿಣಾಮಕಾರಿಯಾಗಿ ಜಾರಿಯಾಗಿ ಸಫಲತೆಯನ್ನು ಕಂಡಿದೆ ಎಂದವರು ಗ್ಯಾರೆಂಟಿ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳು ಪೂರ್ವಾಗ್ರಹ ಪೀಡಿತರಾಗಿ ಯೋಜನೆಯನ್ನು ದೂಷಿಸುವುದು ಸಮಂಜಸವಲ್ಲ ಎಂದಿರುವ ರಾಮಲಿಂಗ ರೆಡ್ಡಿ, ಕೇವಲ ಬಿಜೆಪಿ ಘೋಷಿಸುವ ಯೋಜನೆಗಳು ಮಾತ್ರ ಒಳ್ಳೆಯದು ಎಂಬ ಭ್ರಮೆ ಜನರಲ್ಲಿ ಮೂಡಿಸುವಲ್ಲಿ ಮೋದಿಯವರು ಪ್ರಯತ್ನಿಸುತ್ತಿದ್ದಾರೆ. ಆದರೆ ಜನರಿಗೆ ಎಲ್ಲಾ ಮಾಹಿತಿಯೂ ತಿಳಿದಿದೆ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು ನಂತರ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ರಾಜಕೀಯ ಮರೆತು ಜನರ ಅನುಕೂಲಕ್ಕಾಗಿ ಸರ್ಕಾರಗಳು ಶ್ರಮಿಸಬೇಕು ಎಂದು ಪ್ರತಿಪಾದಿಸಿದ್ದಾರೆ.