ಚಾಮರಾಜನಗರ: ಹನೂರು ಪಟ್ಟಣದ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ಜೋಳದ ಕಡ್ಡಿ ಟ್ರಾಕ್ಟರ್’ಗೆ ಆಕಸ್ಮಿಕ ಬೆಂಕಿ ಬಿದ್ದು ಅನಾಹುತ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ವಿಚಾರ ಟ್ರಾಕ್ಟರ್ ಚಾಲಕನಿಗೆ ತಿಳಿಯದೆ ಆತ ವಾಹನವನ್ನು ಚಲಾಯುಸುತ್ತಾ ಸಾಗಿದ್ದ. ಅದೇ ರಸ್ತೆಯಲ್ಲಿ ಬರುತ್ತಿದ್ದ ಹನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಮೂರ್ತಿ ಅವರು ಟ್ರಾಕ್ಟರನ್ನು ಬೆನ್ನಟ್ಟಿ ತಡೆದು, ಭಾರೀ ಅನಾಹುತ ತಪ್ಪಿಸಿದ್ದಾರೆ.
ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ರವಿ ಎಂಬುವರ ಟ್ರಾಕ್ಟರ್ ನಲ್ಲಿ ಆರ್.ಎಸ್.ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ಜೋಳದ ಕಡ್ಡಿಯನ್ನು ತುಂಬಿಕೊಂಡು ಹೋಗುತ್ತಿದ್ದಾಗ ಎಡಳ್ಳಿ ದೊಡ್ಡಿ ಗ್ರಾಮದ ಸಮೀಪ ಜೋಳದ ಕಡ್ಡಿಗೆ ಬೆಂಕಿ ಹತ್ತಿಕೊಂಡಿದೆ. ಆದರೆ ಚಾಲಕನ ಗಮನಕ್ಕೆ ಬರದೇ ಆತ ವಾಹನ ಚಲಾಯಿಸುತ್ತಲೇ ಇದ್ದ. ಬಂಡಳ್ಳಿ ಗ್ರಾಮದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಬಂದೋಬಸ್ತ್ ಮುಗಿಸಿ ನೂರು ಪಟ್ಟಣಕ್ಕೆ ವಾಪಾಸಾಗುತ್ತದ್ ಇನ್ಸ್ಪೆಕ್ಟರ್ ಆನಂದಮೂರ್ತಿ ಅವರು ಟ್ರಾಕ್ಟರ್’ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದರು.
ತಕ್ಷಣ ಅವರು ಟ್ರಾಕ್ಟರನ್ನು ತಡೆದು ನಿಲ್ಲಿಸಿ ಅದರಲ್ಲಿದ್ದ ಕೂಲಿ ಕಾರ್ಮಿಕರಾದ ಬಸವಣ್ಣ, ಮಹದೇವಸ್ವಾಮಿ, ಸಿದ್ದಪ್ಪರವರನ್ನು ರಕ್ಷಣೆ ಮಾಡಿದ್ದಾರೆ. ಟ್ರ್ಯಾಕ್ಟರ್ ಧಗಧಗಿಸಿ ಹೊತ್ತಿ ಉರಿದಿದ್ದು, ಇನ್ಸ್ಪೆಕ್ಟರ್ ಸಮಯಪ್ರಜ್ಞೆಯಿಂದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.