ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಟಮೋಟೊ ಬೆಳೆಗಾರರು ಸಂಕಷ್ಟದಲ್ಲಿದ್ದು, ರಾಜ್ಯ ಸರಕಾರ ತಕ್ಷಣವೇ ‘ ವಿಶೇಷ ಪ್ಯಾಕೇಜ್ ‘ ಘೋಷಣೆ ಮಾಡುವಂತೆ ಮಾಜಿ ಸಚಿವ ಹೆಚ್ ನಾಗೇಶ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಹಕಾರ ಸಚಿವ ಎಸ್.ಟಿ .ಸೋಮಶೇಖರ್ ಅವರಿಗೆ ಪತ್ರ ಬರೆದಿರುವ ನಾಗೇಶ್, ಟಮೋಟೊ ಬೆಳೆಗಾರರ ರಕ್ಷಣೆಗೆ ಸರಕಾರ ಧಾವಿಸದಿದ್ದರೆ, ರೈತರು ಇನ್ನಷ್ಟು ಸಮಸ್ಯೆಗೆ ಎದುರಿಸಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಟಮೋಟೊ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಇಲ್ಲವೇ “ಬೆಂಬಲ ಬೆಲೆ’ ಘೋಷಿಸುವಂತೆ ಮನವಿ ಮಾಡಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಟಮೋಟೋ ಬೆಳೆ ಬೆಳೆಯುವ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಲಾಕ್ ಡೌನ್ ಜಾರಿಯಿರುವ ಕಾರಣ ರೈತರು ಬೆಳೆದಿರುವ ಟಮೋಟೊ ಬೆಳೆಯನ್ನು ಖರೀದಿಸದ ಕಾರಣ ಅನ್ನದಾತರು ದಾರಿಕಾಣದೆ ಕಂಗಾಲಾಗಿದ್ದಾರೆ ಎಂದು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ನಾಗೇಶ್ ಅವರು ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.
ಪ್ರತಿ ಎಕರೆಗೆ ಟಮೋಟೊ ಬೆಳೆಯಲು ಒಂದುವರೆ ಲಕ್ಷ ಖರ್ಚಾಗುತ್ತದೆ. ರೈತರು ಬ್ಯಾಂಕ್ ಹಾಗೂ ಖಾಸಗಿಯವರಿಂದ ಸಾಲ ಪಡೆದು ಬೆಳೆ ಬೆಳೆದಿರುತ್ತಾರೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಕಾರಣ, ಸರಕಾರ ಮಾನವೀಯತೆ ದೃಷ್ಟಿಯಿಂದ ಕೂಡಲೇ ಬೆಂಬಲ ಬೆಲೆ ನೀಡುವಂತೆ ನಾಗೇಶ್ ಅವರು ಆಗ್ರಹಿಸಿದ್ದಾರೆ.