ಬೆಂಗಳೂರು: ನಮ್ಮ ಸರ್ಕಾರಕ್ಕೆ ರೈತರಿಗೆ ಅಪಮಾನ ಮಾಡುವ ಉದ್ದೇಶವಿಲ್ಲ. ರೈತರ ಮನಸ್ಸಿಗೆ ನೋವಾಗಿದ್ದರೆ ಪಕ್ಷದ ವತಿಯಿಂದ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸಂವಹನ ವಿಭಾಗದ ಸಹ ಅಧ್ಯಕ್ಷರೂ ಆದ ಮಾಜಿ ಶಾಸಕ ರಮೇಶ್ ಬಾಬು ಅವರು, ಸಚಿವ ಶಿವಾನಂದ ಪಾಟೀಲ್ ವಿರುದ್ಧ ಟೀಕಿಸುತ್ತಿರುವ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ಬಾರಿ ಅಧಿವೇಶನ ನಡೆದಿದ್ದರೂ ನಿನ್ನೆ ಪರಿಷತ್ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಿದ್ದಾರೆ. ಅವರ ಆಯ್ಕೆ ಬಗ್ಗೆ ಅವರದೇ ಪಕ್ಷದ ನಾಯಕರು ಬೇರೆ ಬೇರೆ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ಬೊಟ್ಟು ಮಾಡಿದರು. ಸಿದ್ದರಾಮಯ್ಯ ಅವರು ಡಿ.15ರಂದು ಬೆಳಗಾವಿ ಅಧಿವೇಶನದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಸಹಕಾರ ಸಂಘದಲ್ಲಿ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದರು. ರಾಜ್ಯದ ಎಲ್ಲಾ ರೈತರು ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಶಿವಾನಂದ ಪಾಟೀಲ್ ಅವರು ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳಿ ಎಂದು ಹೇಳುತ್ತಾ ಸದ್ಯ ಸಾಲಮನ್ನಾ ಮಾಡುವ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ. ಇದು ನಂತರ ಬೇರೆ ಬೇರೆ ರೀತಿಯ ಸ್ವರೂಪ ಪಡೆದು ರೈತರಿಗೆ ಅವಹೇಳನ ಮಾಡಿದ್ದಾರೆ ಎಂದು ಪ್ರತಿಭಟನೆ ಮಾಡಿದ್ದಾರೆ ಎಂದು ಗಮನಸೆಳೆದರು.
ನಮ್ಮ ಸರ್ಕಾರಕ್ಕೆ ರೈತರಿಗೆ ಅಪಮಾನ ಮಾಡುವ ಉದ್ದೇಶವಿಲ್ಲ. ರೈತರ ಮನಸ್ಸಿಗೆ ನೋವಾಗಿದ್ದರೆ ಪಕ್ಷದ ವತಿಯಿಂದ ವಿಷಾದ ವ್ಯಕ್ತಪಡಿಸುತ್ತೇವೆ. ರೈತರಿಗೆ ತೊಂದರೆ ಮಾಡುವ ಉದ್ದೇಶ ನಮ್ಮದಲ್ಲ. ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟ ನಂತರ ಪ್ರಹ್ಲಾದ್ ಜೋಷಿ ಅವರು ದಿನಬೆಳಗಾದರೆ ಬಾಯಿ ಬಡೆದುಕೊಳ್ಲುತ್ತಾರೆ. ಈ ಹಿಂದೆ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾತ್ರ ಅವರು ಮಾತನಾಡುತ್ತಿಲ್ಲ ಎಂದ ರಮೇಶ್ ಬಾಬು, ಶೋಭಾ ಮೇಡಂ ಅವರು ಸಿದ್ದರಾಮಯ್ಯ ಹಾಗೂ ಶಿವಾನಂದ ಪಾಟೀಲ್ ಅವರ ಟೀಕೆ ಮಾಡಿದ್ದಾರೆ. ಅವರು ಯಾವ ಖಾತೆಗೆ ಸಚಿವರಾಗಿದ್ದಾರೆ ಎಂದು ಬ್ಯಾಟರಿ ಹಾಕಿಕೊಂಡು ಹುಡುಕುತ್ತಿದ್ದೇವೆ. ಅವರು ಕೃಷಿ ಸಚಿವರಾಗಿದ್ದರೆ ಅವರು ರಾಜ್ಯದ ರೈತರಿಗೆ ಯಾವ ಕೊಡುಗೆ ನೀಡಿದ್ದಾರೆ ಎಂದು ಹೇಳಲಿ ಎಂದು ಸವಾಲು ಹಾಕಿದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಿದರೂ ಸಿಗಲಿಲ್ಲ, ಮತ್ತೆ ಸಂಸತ್ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ಶಿವಾನಂದ ಪಾಟೀಲ್ ಅವರನ್ನು ಟೀಕೆ ಮಾಡುತ್ತಿದ್ದಾರೆ ಎಂದವರು ಎದಿರೇಟು ನೀಡಿದರು.
ಮತ್ತೊಬ್ಬ ಸಚಿವ ಭಗವಂತ ಕೂಬಾ ಅವರು ತಮ್ಮ ಖಾತೆಯಿಂದ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಹೇಳಬೇಕು. ಅವರದೇ ಪಕ್ಷದ ಶಾಸಕರು ಇವರ ಮೇಲೆ ಹತ್ಯೆಗೆ ಯತ್ನಿ ಮಾಡಿದ ಆರೋಪ ಮಾಡಿದ್ದಾರೆ. ರಸಗೊಬ್ಬರ ಖಾತೆ ಜವಾಬ್ದಾರಿಯಲ್ಲಿ ನಮ್ಮ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಹೇಳಬೇಕು. ನೀವು ತಂದ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯುವಾಗ ಈ ಬಗ್ಗೆ ಚರ್ಚೆ ಮಾಡಲು ಅಶೋಕ್ ಅವರು ಸೇರಿದಂತೆ ಬಿಜೆಪಿಯ ಯಾವುದೇ ನಾಯಕರಿಗೆ ಶಕ್ತಿ ಇರಲಿಲ್ಲ. ಯಾರಿಗೂ ದಮ್ಮು ತಾಕತ್ತೂ ಇರಲಿಲ್ಲ. ರೈತರಿಗೆ ಸ್ವಾವಲಂಬಿಗಳಾಗಿ ಎಂಬ ಕರೆ ಕೊಟ್ಟ ಶಿವಾನಂದ ಪಾಟೀಲರನ್ನು ಟೀಕೆ ಮಾಡುವ ದುಸ್ಥಿತಿಗೆ ಬಿಜೆಪಿ ನಾಯಕರು ಬಂದಿದ್ದಾರೆ ಎಂದು ರಮೇಶ್ ಬಾಬು ಟೀಕಿಸಿದರು.
ಅಶೋಕ್ ಅವರು ಕಂದಾಯ ಸಚಿವರಾಗಿದ್ದಾಗ 4.50 ಲಕ್ಷ ಪೋಡಿ ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಬಗೆಹಿರಸುವ ಕೆಲಸ ಅಶೋಕ್ ಮಾಡಲಿಲ್ಲ. ಬಗರ್ ಹುಕ್ಕುಂ ಸಾಗುವಳಿ ಸಕ್ರಮ ಮಾಡುವ ವಿಚಾರದಲ್ಲಿ ಯಡಿಯೂರಪ್ಪನವರ ಆಶ್ವಾಸನೆ ಈಡೇರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಈ ಪ್ರಕರಣಗಳನ್ನು ಸಮರೋಪಾದಿಯಲ್ಲಿ ಬಗೆಹರಿಸುತ್ತಿದೆ. ಫಸಲ್ ಭಿಮಾ ಯೋಜನೆಯಲ್ಲಿ ಕರ್ನಾಟಕದ 50 ಲಕ್ಷ ರೈತರಿಗೆ ಹಣ ಪಾವತಿಯಾಗಿಲ್ಲ ಎಂದು ಸಿಎಜಿ ವರದಿ ಹೇಳುತ್ತಿದೆ. ರೈತರಿಗೆ ನೆರವಾಗದವರು ಒಂದು ಹೇಳಿಕೆ ಇಟ್ಟುಕೊಂಡು ಟೀಕೆ ಮಾಡುವುದನ್ನು ಬಿಡಬೇಕು ಎಂದು ಅವರು ಮಾರ್ಮಿಕವಾಗಿ ನುಡಿದರು.






















































