ಬೆಂಗಳೂರು: ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ಅನುಮಾನ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿನ ಘಟನೆಗಳು ಹಾಗೂ ಶಾಸಕ ಸಿ.ಟಿ.ರವಿ ಬಂಧನ ವಿಚಾರ ಕುರಿತಂತೆ ಪ್ರತಿಕ್ರಿಸಿರುವ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ? ಎಂದಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನವನ್ನು ಅವರು ಖಂಡಿಸಿದ್ದಾರೆ.
ಸಚಿವೆ ಬಗ್ಗೆ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಖದ್ದು ಎಂದು ಅಸಮಾಧಾನ ಹೊರಹಾಕಿರುವ ಹೆಚ್ಡಿಕೆ, ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿದೆ. ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ. ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ. ಸರ್ಕಾರದಲ್ಲಿರುವ ಕೆಲವರು ಈ ಘಟನೆಗೆ ಜ್ವಾಲೆ ಸ್ವರೂಪ ನೀಡಿ ಪ್ರಚೋದಿಸುತ್ತಿರುವುದು ಕಳವಳಕಾರಿ ಎಂದಿದ್ದಾರೆ.
ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ.
ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ? ವಿಧಾನ ಪರಿಷತ್ ಸದಸ್ಯರಾದ ಶ್ರೀ @CTRavi_BJP ಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನ ನಡೆದಿರುವುದು ಖಂಡನೀಯ.ಗೌರವಾನ್ವಿತ ಸಚಿವೆ ಬಗ್ಗೆ ಸಿ.ಟಿ.ರವಿ… pic.twitter.com/40oYfSJnFM
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 20, 2024
ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಕಾಂಗ್ರೆಸ್ ಸರ್ಕಾರ ಪೌರುಷ ಮೆರೆದಿತ್ತು. ಅಂದು ಪೊಲೀಸರ ಪ್ರತಾಪ ಹೇಳತೀರದು. ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೊಲೀಸರೇ, ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು? ಅಥವಾಅವರೇ ನಿಮ್ಮ ಕಣ್ತಪ್ಪಿಸಿ ಒಳ ನುಸಳಿದರೋ ಅಥವಾ ಸರಕಾರವೇ ಷಡ್ಯಂತ್ರ ಮಾಡಿ ಒಳ ನುಗ್ಗಿಸಿತೋ? ಇಲ್ಲವೇ ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ? ಎಂದು ಹೆಚ್ಡಿಕೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ, ಕೊಲೆಗೆತ್ನಿಸುತ್ತಾರೆ, ಮಾರ್ಷಲ್’ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ ಎಂದು ವಿಶ್ಲೇಷಿಸಿರುವ ಕುಮಾರಸ್ವಾಮಿ, ಆ ಗೌರವಾನ್ವಿತ ಸಚಿವೆಯ ಆಪ್ತ ಸಹಾಯಕ ಶಾಸಕರ ಮೇಲೇರಿ ಹೋಗುವ, ಕಾರಿಡಾರಿನ ಕಬ್ಬಿಣದ ಬಾಗಿಲನ್ನೇ ಮುರಿಯಲೆತ್ನಿಸಿ ಹಲ್ಲೆಗೆ ಯತ್ನಿಸುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ರಾಜ್ಯದಲ್ಲಿ ಆಡಳಿತ ಸುರಕ್ಷಿತ ಕೈಗಳಲ್ಲಿ ಇಲ್ಲ ಎನ್ನುವುದಕ್ಕೆ ಆ ದೃಶ್ಯಗಳೇ ಸಾಕ್ಷಿ ಎಂದು ಬೊಟ್ಟುಮಾಡಿದ್ದಾರೆ. ಈ ಸಂಬಂಧದ ದೃಶ್ಯಗಳನ್ನೂ ಅವರು ಟ್ಯಾಗ್ ಮಾಡಿದ್ದಾರೆ.
ಸುವರ್ಣಸೌಧಕ್ಕೆ ನುಗ್ಗಿದ ಗೂಂಡಾಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಪಟ್ಟಿ ತೆರೆಯಬೇಕು. ಸಮಾಜದ ಶಾಂತಿಗೆ ಬೆದರಿಕೆಯಾಗಿರುವ ಆ ಕಿಡಿಗೇಡಿಗಳನ್ನು ಸುವರ್ಣಸೌಧ, ವಿಧಾನಸೌಧದಿಂದ ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ಪ್ರತಿಪಾದಿಸಿರುವ ಕುಮಾರಸ್ವಾಮಿ, ಇಡೀ ರಾತ್ರಿ ಸಿ.ಟಿ.ರವಿ ಅವರನ್ನು ಪೊಲೀಸ್ ಜೀಪಿನಲ್ಲಿ ಸುತ್ತಿಸುತ್ತೀರಿ ಎಂದರೆ, ಇದಕ್ಕೆ ಯಾರ ಫರ್ಮಾನು ಕಾರಣ? ಈ ಗೂಂಡಾಗಳ ಗ್ಯಾಂಗ್ ಲೀಡರ್ ಯಾರು? ಎಂದು ಪ್ರಶ್ನಿಸಿದ್ದಾರೆ.