ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ಮತ್ತೆ ವಿದ್ಯಮಾನಗಳು ಗರಿಗೆದರಿವೆ. ಕೆಲವು ದಿನಗಳ ಹಿಂದೆ ತಮ್ಮ ಇಲಾಖೆಯಲ್ಲಿ ಅನ್ಯರ ಹಸ್ತಕ್ಷೇಪ ನಡೆಯುತ್ತದೆ ಎಂದು ವಾಗ್ದಾಳಿ ನಡೆಸಿ, ಬಿಎಸ್ವೈ ಆಪ್ತರನ್ನು ಕೆರಳಿಸಿರುವ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, ಇದೀಗ ಮತ್ತೆ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಹೇಳಿಕೆ ನೀಡಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ನೀಡಿದ ಹೇಳಿಕೆ ಅಚ್ಚರಿ ಮತ್ತು ಕುತೂಹಲ ಸೃಷ್ಟಿಸಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾವೆಲ್ಲ ಪರೀಕ್ಷೆ ಬರೆದಿದ್ದೇವೆ. ಅತೀ ಶೀಘ್ರದಲ್ಲಿ ಫಲಿತಾಂಶ ಪ್ರಕಟಣೆಯಾಗಲಿದೆ ಎಂದು ಯೋಗೇಶ್ವರ ಹೇಳದರು. ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ನನ್ನ ವೈಯಕ್ತಿಕ ಸಮಸ್ಯೆ ಹಾಗೂ ರಾಜ್ಯ ಸರ್ಕಾರ ಮತ್ತು ರಾಜ್ಯ ಬಿಜೆಪಿಯ ಮೂಲಭೂತ ಸಮಸ್ಯೆಗಳ ಬಗ್ಗೆ ಹೈಕಮಂಡ್ ಗೆ ವಿವರಣೆ ನೀಡಿದ್ದೇನೆ. ಸರ್ಕಾರ ಹಾಗೂ ಪಕ್ಷದ ಮೂಲಭೂತ ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದರು.
‘ಏನೇ ಆಗಲಿ ಪರೀಕ್ಷೆ ಬರೆಯಲಾಗಿದ್ದು, ಅತೀ ಶೀಘ್ರದಲ್ಲಿ ಫಲಿತಾಂಶ ಪ್ರಕಟವಾಗಲಿದೆ’ ಎಂದು ಅವರು ಖಚಿತ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಒಬ್ಬ ಜವಾಬ್ದಾರಿ ಸಚಿವನಾಗಿ ನಾನು ನನ್ನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇನೆ. ನನ್ನ ವೈಯಕ್ತಿಕ ನೋವುಗಳು ಹಾಗೂ ಸಮಸ್ಯೆಗಳನ್ನು ನಮ್ಮ ದೆಹಲಿ ನಾಯಕರ ಮುಂದೆ ಹೇಳಿದ್ದೇನೆ. ಪಕ್ಷಕ್ಕೆ ದಕ್ಕೆ ಉಂಟಾಗಬಾರದು ಹಾಗೂ ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಹಿನ್ನಲೆಯಲ್ಲಿ, 4 ಗೋಡೆಗಳ ಮಧ್ಯೆ ವಿವರಣೆ ನೀಡಿದ್ದೇನೆ ಎಂದರು.
ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ನನಗೆ ತುಂಬಾ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ನಮ್ಮ ಬಿ.ಜೆ.ಪಿ. ಪಕ್ಷದ ನಾಯಕರುಗಳು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಬೇಡ. ಇದಕ್ಕೆ ಕೊನೆಯಾಡಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆ ಇಲ್ಲ. ಕರ್ನಾಟಕದಲ್ಲಿ ಅತೀ ಉತ್ತಮವಾದ ಸರ್ಕಾರ ಇರಬೇಕು ಪಕ್ಷ ಸಂಘಟನೆ ಸಹ ರಾಜ್ಯದ ಇತರ ಭಾಗಗಳಂತೆ ಹಳೇ ಮೈಸೂರು ಭಾಗದಲ್ಲೂ ನಡೆಯಬೇಕು ಎಂದವರು ಹೇಳಿದರು.
ನನಗೆ ಕೋಲಾರ ಜಿಲ್ಲೆ ಉಸ್ತುವಾರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಧ್ಯಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಇದ್ದಾರೆ. ಈ ನಿಟ್ಟಿನಲ್ಲಿ ನನಗೆ ಕೋಲಾರ ಉಸ್ತುವಾರಿ ನೀಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದರು.
ನಾನು ಹಾಗೂ ರಮೇಶ್ ಜಾರಕಿಹೊಳಿ 20 ವರ್ಷದ ಸ್ನೇಹಿತರು. ಅವರ ಇತ್ತೀಚಿನ ರಾಜಕೀಯ ನಿಲುವಿನ ಬಗ್ಗೆ ನಾನು ಚರ್ಚಿಸಿಲ್ಲ. ಭೇಟಿ ಸಹ ಮಾಡಿಲ್ಲ. ರಮೇಶ್ ಜಾರಕಿಹೊಳಿ ರವರು ಮುಂಬೈ ಗೆ ಹೋಗಿ ರಾಜೀನಾಮೆ ನೀಡುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಅವರ ಪ್ರಚಲಿತ ರಾಜಕೀಯ ನಿರ್ಣಯದ ಬಗ್ಗೆ ಗೊತ್ತಿಲ್ಲ. ರಮೇಶ್ ಜಾರಕಿಹೊಳೆ ಅವರು ರಾಜೀನಾಮೆ ಕೊಡುವುದಿಲ್ಲ ಎಂದು ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.