ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಗರಿಗೆದರಿದ್ದು ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಮಹತ್ವದ ಸೀಟು ಹೊಂದಾಣಿಕೆಯ ಒಪ್ಪಂದವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಡಿಎಂಕೆಗೆ ಸೆಡ್ಡು ಹೊಡೆಯುವ ತಂತ್ರಗಾರಿಕೆ ನಡೆಸುತ್ತಿರುವ ಕಾಂಗ್ರೆಸ್ ತಮಿಳುನಾಡಿನ ಪ್ರಾದೇಶಿಕ ಪಕ್ಷ ಡಿಎಂಕೆ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಹಾವು ಏಣಿಯಾಟ ನಡೆಯುತ್ತಿತ್ತು. ಹಾಗಾಗಿ ಒಮ್ಮತದ ನಿರ್ದಾರಕ್ಕೆ ಬರಲಾಗಲಿಲ್ಲ. ಆದರೆ ಎರಡೂ ಪಕ್ಷಗಳು ಇದೀಗ ಒಮ್ಮತದ ನಿರ್ಧಾರಕ್ಕೆ ಬಂದಿದ್ದು ನಿರ್ದಿಷ್ಟ ಸ್ಥಾನಗಳನ್ನು ಹಂಚಿಕೊಳ್ಳಲು ಮುಂದಾಗಿವೆ. ಶನಿವಾರ ತಡರಾತ್ರಿ ಎರಡೂ ಪಕ್ಷಗಳ ಮುಖಂಡರು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ನಿರ್ದಿಷ್ಟ ಸ್ಥಾನಗಳನ್ನು ಪಡೆದುಕೊಳ್ಳುವ ಬಗ್ಗೆ ಸಹಮತದ ನಿರ್ಧಾರವನ್ನ ಕೈಗೊಂಡಿದ್ದು ಕಾಂಗ್ರೆಸ್ ಹೈಕಮಾಂಡ್ ಕೂಡ ಡಿಎಂಕೆಯ ತೀರ್ಮಾನಕ್ಕೆ ತಲೆಬಾಗಿದೆ. ತಮಿಳುನಾಡು ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ದಿನೇಶ್ ಗುಂಡೂರಾವ್ ಹಾಗೂ ಟಿಎನ್ಸಿಸಿ ಅಧ್ಯಕ್ಷ ಕೆ.ಎಸ್. ಅಲಗಿರಿ ಉಪಸ್ಥಿತಿಯಲ್ಲಿ ಕಾಂಗ್ರೆಸ್ ನಿಯೋಗ ಡಿಎಂಕೆ ನಾಯಕ ಸ್ಟಾಲಿನ್ ಜೊತೆ ಸುಮಾರು 20 ನಿಮಿಷಗಳ ಕಾಲ ಸಭೆ ನಡೆಸಿತು. ಈ ಸಂದರ್ಭದಲ್ಲಿ ತಮಿಳುನಾಡಿನ 24 ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲು ಡಿಎಂಕೆ ಒಪ್ಪಿಕೊಂಡಿದೆ.
ಈ ನಡುವೆ ಎಡಿಎಂಕೆ ಪಕ್ಷವು ಬಿಜೆಪಿ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಮಧ್ಯೆ, ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ
ಈ ಹಿಂದೆ ಕೂಡ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿ ಪಕ್ಷಗಳೇ. ಇದೀಗ ಕೂಡಾ ತಮಿಳುನಾಡು ಅಖಾಡದಲ್ಲಿ ಕಾಂಗ್ರೆಸ್ನ ಸಮ್ಮಿತ್ರ ಪಕ್ಷವಾಗಿ ಡಿಎಂಕೆ ಗುರುತಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿದೆ.