ನವದೆಹಲಿ: ವಿದ್ಯುನ್ಮಾನ ಮತಯಂತ್ರ ಹಾಗೂ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ಮತಗಳ ಎಣಿಕೆ ಕುರಿತಂತೆ ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಇವಿಎಂ ಮೆಷೀನ್ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಮತಗಳೊಂದಿಗೆ ಸಂಪೂರ್ಣವಾಗಿ ಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಈ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿ ಕುರಿತಂತೆ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠ ಏಪ್ರಿಲ್ 18ರಂದು ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಶುಕ್ರವಾರ ತೀರ್ಪು ಪ್ರಕಟಿಸಿರುವ ನ್ಯಾಯಪೀಠ, ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್ ಪೂರ್ಣ ತಾಳೆಯಾಗಕೆಂಬ ಅರ್ಜಿದಾರರ ಅಭಿಪ್ರಾಯವನ್ನು ತಿರಸ್ಕರಿಸಿತು.
ಪ್ರಜಾಪ್ರಭುತ್ವವು ಸಾಮರಸ್ಯವನ್ನು ನಿರ್ಮಿಸಲು ಶ್ರಮಿಸುವುದಾಗಿದೆ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕಾಗಿದೆ. ಹೀಗಿರುವಾಗ ಮತದಾನ ಪ್ರಕ್ರಿಯೆ ಮೇಲೆ ಅಪನಂಬಿಕೆ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.