ದೆಹಲಿ: ಟೋಕಿಯೋದಲ್ಲಿ ನಡೆಯುತ್ತಿರವ ಪ್ಯಾರಾಲಿಂಪಿಕ್‌ನಲ್ಲಿ ಕನ್ನಡಿಗನೊಬ್ಬ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಐಎಎಸ್ ಅಧಿಕಾರಿಯಾಗಿರುವ ‘ಸುಹಾಸ್ ಯತಿರಾಜ್’ ಇದೀಗ ಭಾರತದ ಕೀರ್ತಿಯನ್ನು ಜಗದುದ್ದಗಲಕ್ಕೂ ಸಾರಿದ್ದಾರೆ.
ಶನಿವಾರ ನಡೆದ ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್-4 ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ದ 21-9, 21-15ರ ಅಂತರದಲ್ಲಿ ಗೆದ್ದಿದ್ದ ಸುಹಾಸ್, ಫೈನಲ್‌ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್‌ನ ಲೂಕಸ್ ಮಜೂರ್ ವಿರುದ್ದ ಸರಣಸಾಡಬೇಕಾಯಿತು. ಈ ರೋಚಕ ಹಣಾಹಣಿಯಲ್ಲಿ ಸುಹಾಸ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕರುನಾಡ ಕುವರ:
ಎಲ್.ವೈ.ಸುಹಾಸ್ ಅವರು ಮೂಲತಃ ಕನ್ನಡಿಗರು. ಹಾಸನ ಮೂಲದ ಇವರು ಹಾಸನ, ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದವರು. ಸುರತ್ಕಲ್‌ನಲ್ಲಿರುವ ಎನ್‌ಐಟಿಕೆಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದಿರುವ ಅವರು, 2007ರ ಬ್ಯಾಚ್‌ನಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಉತ್ತರಪ್ರದೇಶದ ಪ್ರಯಾಗರಾಜ್, ಆಗ್ರಾ ಸಹಿತ ಹಲವು ಜಿಲ್ಲೆಗಳಲ್ಲಿ ಡಿಸಿಯಾಗಿ ಸೆಲ್ಲಿಸಿರುವ ಸುಹಾಸ್, ಪ್ರಸ್ತುತ ನೋಯ್ಡಾದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.