ನಮ್ಮ ನೋವಿನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಿ: ಕ್ಷಮೆ ಯಾಚಿಸಿದ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು: ಆರು ಸಚಿವರ ವಿರುದ್ಧ ನಿರಂತರ ತೇಜೋವಧೆ, ಆರೋಪ ಮಾಡುತ್ತಿರುವಾಗ ನಮಗಾದ ಅವಮಾನ, ನೋವು ಯಾರಿಗೂ ಅರಿವಾಗಲಿಲ್ಲ. ಈಗ ನಾನು ನೀಡಿದ ಹೇಳಿಕೆಯನ್ನು ಶಬ್ದಶಃ ಅರ್ಥೈಸದೆ ನಮ್ಮ ಭಾವನೆಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿರುವುದಕ್ಕೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಈ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ನಾನೂ ಸೇರಿದ ಹಾಗೆ ಕೆಲ ಸಚಿವರ ನೈತಿಕ ಅರ್ಹತೆಯನ್ನು ಕೆಲ ವಿಪಕ್ಷ ನಾಯಕರು ಸದನದ ಒಳಗೆ ಹಾಗೂ ಒಳಗೆ ನಿರಂತರವಾಗಿ ಪ್ರಶ್ನೆ ಮಾಡಿ ನಮ್ಮ ಘನತೆಗೆ, ಗೌರವಕ್ಕೆ ಹಾನಿ ಉಂಟು ಮಾಡಿದ್ದಾರೆ. ರಾಜಕೀಯ ಷಡ್ಯಂತ್ರದ ಪರಿಣಾಮ ಇತ್ತೀಚೆಗೆ ಆಗಿರುವ ಕೆಲ ಆಘಾತಕಾರಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪರಿಣತರು, ಹಿರಿಯರ ಸಲಹೆ ಸೂಚನೆ ಮೇರೆಗೆ ನಾವು ನಮ್ಮ ಹಕ್ಕುಗಳ ರಕ್ಷಣೆಗೆ ಸಾಂವಿಧಾನಿಕವಾಗಿ ಲಭ್ಯ ಇರುವ ಅವಕಾಶಗಳ ಅಡಿಯಲ್ಲಿ ಉಪಕ್ರಮಕ್ಕೆ ಮುಂದಾಗಿದ್ದು ನಿಜ. ಅದರ ಅರ್ಥ ನಾವೇನೋ ಅಪರಾಧ ಎಸಗಿದ್ದೇವೆ ಅಂತಲ್ಲ. ಹೀಗೆ ಕಾನೂನು ರಕ್ಷಣೆಯ ಮೊರೆ ಹೋಗಿದ್ದು ನಾವೇ ಮೊದಲಲ್ಲ, ಕೊನೆಯೂ ಆಗಲಾರದು ಎಂದು ಸಚಿವರು ಹೇಳಿದ್ದಾರೆ.
ಇದೆಲ್ಲ ತಿಳಿದೂ ಕೆಲ ಹಿರಿಯ ನಾಯಕರು ನಮ್ಮ ತೇಜೋವಧೆ ಮಾಡಿ, ವ್ಯಕ್ತಿತ್ವಕ್ಕೆ ಕಳಂಕ ತಂದು ನಮ್ಮ ಸಾರ್ವಜನಿಕ ಜೀವನಕ್ಕೆ ಇತಿಶ್ರೀ ಹೇಳಲು ಮುಂದಾದಾಗ ಅನಿವಾರ್ಯವಾಗಿ ನನ್ನ ಮನಸ್ಸಿಗಾದ ನೋವನ್ನು ಬಹಿರಂಗವಾಗಿ ತೋಡಿಕೊಂಡಿದ್ದೇನೆ. ನನ್ನ ಹೇಳಿಕೆ ಹಿಂದೆ ಇರುವ ನನ್ನ ಮನಸ್ಸಿನ ವೇದನೆ ನೋವನ್ನು ಅರ್ಥ ಮಾಡಿಕೊಳ್ಳಬೇಕೇ ವಿನಹ ನಾನಾಡಿದ ಮಾತುಗಳ ಶಬ್ದಶಃ ವ್ಯಾಖ್ಯಾನ ಮಾಡಕೂಡದೆಂದು ವಿನಮ್ರವಾಗಿ ಕೋರುತ್ತೇನೆ ಎಂದು ಸಚಿವರು ಮನವಿ ಮಾಡಿದ್ದಾರೆ.
ಶಾಸಕರು, ಶಾಸನ ಸಭೆ ಬಗ್ಗೆ ಅಪಾರ ಗೌರವ ಹೊಂದಿರುವ ನಾನು ಯಾರ ಸ್ವಾಭಿಮಾನ,ಗೌರವಕ್ಕೆ ಧಕ್ಕೆ ತರುವ ಮಾತೇ ಇಲ್ಲ. ಆದಾಗ್ಯೂ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಆ ಕುರಿತು ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.
ನಮಗಾಗಿರಬಹುದಾದ ಅವಮಾನ, ಮಾನಸಿಕ, ಭಾವನಾತ್ಮಕ ನೋವು ಯಾರಿಗೂ ಅರ್ಥವಾಗಲಿಲ್ಲ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವ ನನ್ನ ಹೇಳಿಕೆ ಕೆಲವರಿಗೆ ಬಹಳ ತಪ್ಪಾಗಿ ಕಾಣುತ್ತಿದೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.
ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಹದಿನೇಳು ಜನರ ವಿರುದ್ದ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳಿಂದ ಮಹತ್ವವಾಗಿರುವ ರಾಜ್ಯ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆಯಲು ಬಿಡದೆ ಅನವಶ್ಯಕ ವಿಚಾರಗಳನ್ನು ಪ್ರಸ್ತಾಪಿಸಿ ಸದನದ ಮತ್ತು ಶಾಸಕರ ಸಮಯವನ್ನು ಕಾಂಗ್ರೆಸ್ ವ್ಯರ್ಥ ಮಾಡಿದೆ. ರಾಜಕೀಯ ದುರುದ್ದೇಶದಿಂದ 6 ಸಚಿವರ ತೇಜೋವಧೆ ಮಾಡಲು ಯತ್ನಿಸಿದೆ ಎಂದು ಸಚಿವರು ಹೇಳಿದ್ದಾರೆ.