ಬೆಂಗಳೂರು: ನೀರಾವರಿ ಇಲಾಖಾ ಕರ್ಮಕಾಂಡ, ಜಿಂದಾಲ್ ಜಮೀನು ವಿವಾದ ಸಹಿತ ವಿವಿಧ ಹಗರಣಗಳ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಬಿಎಸ್‌ವೈ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ರಣತಂತ್ರ ರೂಪಿಸುತ್ತಿದೆ.
ನೀರಾವರಿ ಇಲಾಖೆಯಲ್ಲಿ ಬಹುಕೋಟಿ ರೂಪಾಯಿ ಟೆಂಡರ್ ಗೋಲ್‌ಮಾಲ್ ನಡೆದಿದೆ ಎಂದು ಆಡಳಿತ ಪಕ್ಷದ ಶಾಸಕ ವಿಶ್ವನಾಥ್ ಅವರೇ ಗಂಭೀರ ಆರೋಪ ಮಾಡಿದ್ದರು. ಇದೇ ಸಂದರ್ಭದಲ್ಲಿ ಜಿಂದಾಲ್ ಕಂಪನಿಗೆ 3364 ಎಕರೆ ಜಮೀನು ಮಂಜೂರು ಮಾಡಿರುವ ಪ್ರಕ್ರಿಯೆ ವಿರುದ್ದವೂ ಆಡಳಿತ ಪಕ್ಷದ ಶಾಸಕರು, ಸಚಿವರೇ ಸಿಡಿದೆದ್ದಿದ್ದಾರೆ. ಜೊತೆಗೆ ಈ ಕುರಿತು ಕೋರ್ಟ್ ವಿಚಾರಣೆಯೂ ಸಾಗಿದೆ. ಇದೀಗ ಈ ವಿಚಾರಗಳು ಹಾಗೂ ಭ್ರಷ್ಟಾಚಾರ ಆರೋಪ ಸಂಬಂಧ ಚರ್ಚೆಗೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದು ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಒಂದೆಡೆ ಜಾರಕಿಹೊಳಿ ಬ್ರದರ್ಸ್ ಸವಾಲು.. ಮತ್ತೊಂದೆಡೆ ಬಳ್ಳಾರಿ ನಾಯಕರ ಅಸಮಾಧಾನ.. ಈ ಬೆಳವಣಿಗೆಗಳೇ ಸರ್ಕಾರದ ವಿರುದ್ಧದ ತಮ್ಮ ಸಮರಕ್ಕೆ ವರದಾನವಾಗುತ್ತದೆ ಎಂಬುದು ಪ್ರತಿಪಕ್ಷಗಳ ಲೆಕ್ಕಾಚಾರ..
ಈ ನಡುವೆ ಆಡಳಿತದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಆರೋಪ ಇದೀಗ ರಾಜ್ಯ ರಾಜಕೀಯದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಇತ್ತೀಚೆಗೆ ಸಚಿವ ಯೋಗೇಶ್ವರ್ ಅವರೇ ಈ ಕುರಿತು ವಿವಾದದ ಬಾಂಬ್ ಸಿಡಿಸಿ ಆಡಳಿತಾರೂಢ ಕಮಲ ಪಾಳಯದಲ್ಲಿ ತಳಮಳ ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಅವರಿಗೂ ಅತೃಪ್ತರು ದೂರು ಸಲ್ಲಿಸಿದ್ದಾರೆ. ಜೊತೆಗೆ 40ಕ್ಕೂ ಹೆಚ್ಚು ಶಾಸಕರು ಪ್ರಧಾನಿ ಮೋದಿಯವರಿಗೂ ಪತ್ರ ಬರೆದು ರಾಜ್ಯದ ವಿವಾದದ ಬೆಂಕಿಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದರು.
ಆಡಳಿತಾರೂಢ ಬಿಜೆಪಿಯಲ್ಲಿನ ಈ ಬೆಳವಣಿಗೆಗಳ ಲಾಭ ಪಡೆಯಲು ಪ್ರತಿಪಕ್ಷಗಳು ಮುಂದಾಗಿದ್ದು, ರಾಜ್ಯ ಸರ್ಕಾರದ ವಿರುದ್ದ ಮಂಬರುವ ಅಧಿವೇಶನದಲ್ಲಿ ನಿಲುವಳಿ ಸೂಚನೆ ಅಥವಾ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಅದಾಗಲೇ ಆಡಳಿತ ಪಕ್ಷದ ಶಾಸಕರೇ ಬಯಲು ಮಾಡಿರುವ ಈ ಭ್ರಷ್ಟಾಚಾರ ಪ್ರಕರಣಗಳ ಆರೋಪಗಳು, ಹಾಗೂ ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಕುರಿತು ಸರ್ಕಾರದ ಸಚಿವರೇ ಆರೋಪಿಸಿರುವ ವಿಚಾರಗಳ ಚರ್ಚೆಗಾಗಿ ವಿಶೇಷ ಅಧಿವೇಶನ ಕರೆಯಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಹೆಚ್.ಡಿ.ಕುಮಾರಸ್ವಾಮಿ ಕೂಡಾ ಒತ್ತಡ ಹೇರಿದ್ದಾರೆ.
ಈ ಬೆಳವಣಿಗೆಗಳನ್ನು ಪ್ರಸ್ತಾಪಿಸಿ, ಸರ್ಕಾರದ ವಿರುದ್ದ ದೊಡ್ಡಮಟ್ಟದಲ್ಲಿ ಸಮರತಂತ್ರ ಹೆಣೆದು ಬಿಎಸ್‌ವೈ ಸರ್ಕಾರವನ್ನು ಪತನಗೊಳಿಸಲು ಎರಡೂ ಪಕ್ಷಗಳು ರಣವ್ಯೂಹ ರಚಿಸುವ ಪ್ರಯತ್ನದಲ್ಲಿದೆ.
ಈ ಸಂಬಂಧ ಹೆಚ್ಡಿಕೆ ಅವರು ಸದನಗಳ ಪರಮೋಚ್ಛ ಮುಖ್ಯಸ್ಥರಾದ ರಾಜ್ಯಪಾಲರು ಹಾಗೂ ಸದನದ ಮುಖ್ಯಸ್ಥರಾದ ವಿಧಾನಸಭಾಧ್ಯಕ್ಷರಿಗೆ ಪತ್ರಗಳನ್ನು ಬರೆದಿದ್ದಾರೆ. ಈ ಪತ್ರ ಇದೀಗ ರಾಜ್ಯ ರಾಜಕಾರಣದಲ್ಲಿ ಕದನ ಕೌತುಕ ಸೃಷ್ಟಿಸಿದೆ.
ಆಡಳಿತ ಪಕ್ಷದ ಶಾಸಕರೇ ಬಿಟ್ಟಿರುವ ವಿವಾದಗಳ ಹಾವುಗಳನ್ನು ಇನ್ನು ಮುಂದೆ ಪ್ರತಿಪಕ್ಷಗಳು ಯಾವ ರೀತಿ ಆಡಿಸುತ್ತದೆ ಎಂಬುದೇ ಮುಂದಿರುವ ಕುತೂಹಲ.
ನಾಡಿನ ಕೋವಿಡ್ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ “ಕನ್ನಡ, ಕನ್ನಡಿಗ, ಕರ್ನಾಟಕ”ದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿ ರಾಜ್ಯಪಾಲರು, ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷರಿಗೆ ಕುಮಾರಸ್ವಾಮಿ ಅವರು ಪತ್ರಬರೆದಿದ್ದಾರೆ. ಈ ಪತ್ರಗಳ ಪ್ರತಿಯನ್ನು ಅವರು ಟ್ವಿಟ್ಟರ್‌ಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಡಿನ ಕೋವಿಡ್ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ "ಕನ್ನಡ, ಕನ್ನಡಿಗ, ಕರ್ನಾಟಕ"ದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿ ರಾಜ್ಯಪಾಲರು, ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷರಿಗೆ ಬರೆದ ಪತ್ರ. pic.twitter.com/aozEIoamFG
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 25, 2021