(ವರದಿ: ಶ್ವೇತಾ ಎಸ್)
ಗದಗ: ಶಂಕುಹುಳುಗಳ ಅವಾಂತರಕ್ಕೆ ಗದಗ ಜಿಲ್ಲೆ ಯತ್ತಿನಹಳ್ಳಿ ಗ್ರಾಮಸ್ಥರು ಹೈರಾಣಾಗಿದ್ದಾರೆ. ಈ ಶಂಕುಹುಳುಗಳ ಕಾಟ ಮಿತಿಮೀರಿಹೋಗಿದೆ. ಗ್ರಾಮದ ಪ್ರತಿ ಮನೆ ಗೋಡೆ, ಹಿತ್ತಲ, ನೀರಿನ ಟ್ಯಾಂಕ್, ಹೀಗೆ ಗ್ರಾಮದ ತುಂಬೆಲ್ಲ ಪ್ರತಿ ಹೆಜ್ಜೆ ಹೆಜ್ಜೆಗೂ ಶಂಕುಹುಳುಗಳ ಕಾಟ ಹೆಚ್ಚಾಗಿದೆ. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಅಲ್ಲೊಂದು ಇಲ್ಲೊಂದು ಕಾಣಿಸಿಕೊಳ್ತಿದ್ದ ಈ ಹುಳುಗಳು ಈ ವರ್ಷ ಗ್ರಾಮಸ್ಥರ ನೆಮ್ಮದಿ ಕೆಡಿಸುವಷ್ಟರ ಮಟ್ಟಿಗೆ ಹೆಚ್ಚಿಗೆ ಆಗಿವೆ.
ಮೋಡ ಕವಿದ ವಾತಾವರಣ ಇದ್ದಾಗ ರಾಜಾರೋಷವಾಗಿ ನುಗ್ಗುವ ಇವುಗಳು ಸ್ಬಲ್ಪ ಬಿಸಿಲು ಕಾಣಿಸಿಕೊಂಡ್ರೆ ಸಾಕು ಪೊದೆ ಸೇರುತ್ತವೆ. ಪಕ್ಕದ ಯಾವ ಊರಲ್ಲಿಯೂ ಇರದ ಇಷ್ಟು ಸಂಖ್ಯೆಯ ಹುಳುಗಳು ನಮ್ಮೂರಲ್ಲಿ ಮಾತ್ರ ಯಾಕಿಷ್ಟು ಅಂತ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ. ಮನೆಯ ಹಿತ್ತಲ, ಪಡಸಾಲೆ, ಅಡುಗೆಮನೆ, ಗೋಡೆ ಯಾವುದನ್ನೂ ಬಿಡದ ಹುಳುಗಳು ತೊಂದರೆ ಕೊಡದಿದ್ರೂ ಎಲ್ಲೆಂದರಲ್ಲಿ ಗಲೀಜು ಮಾಡಿ ನೆಮ್ಮದಿಗೆ ಭಂಗ ತರ್ತಿದ್ದು ಗ್ರಾಮ ಪಂಚಾಯತಿಯವರು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಿದ್ದಾರೆ ಸ್ಥಳಿಯರು.ಇದಷ್ಟೇ ಅಲ್ಲದೇ ಹುಳುಗಳು ಗ್ರಾಮದ ಸುತ್ತಲೂ ಇರೋ ಜಮೀನುಗಳಿಗೂ ಎಂಟ್ರಿ ಕೊಟ್ಟಿವೆ. ರಾತ್ರಿ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜಮೀನುಗಳಿಗೆ ಎಂಟ್ರಿ ಕೊಡೋ ಈ ಶಂಕುಸೈನ್ಯ ಆಗತಾನೆ ಮೊಳಕೆ ಒಡೆದ ಬೆಳೆಗಳನ್ನೆಲ್ಲ ತಿಂದು ಹಾಕ್ತಿವೆ. ಯಾವ ಕ್ರಿಮಿನಾಶಕ ಸಿಂಪಡಣೆ ಮಾಡಿದ್ರೂ ಇವುಗಳ ಕಾಟ ಮಾತ್ರ ನಿಂತಿಲ್ಲ.
ರೈತರು ಬೆಳೆದ ಹತ್ತಿ, ಶೇಂಗಾ, ಹೆಸರು, ಕಡಲೆ ಸೇರಿದಂತೆ ಎಲ್ಲಾ ಬೆಳೆಗಳನ್ನ ತಿಂದು ನಾಶ ಮಾಡ್ತಿವೆ. ಈಗಾಗಲೇ ಪ್ರವಾಹ, ಅತೀಯಾದ ಮಳೆ, ಜೊತೆಗೆ ಕೊರೊನಾ ಅಂತ ಸಮಸ್ಯೆ ಅನುಭವಿಸಿರೋ ಅನ್ನದಾತನಿಗೆ ಚೇತರಿಕೆ ಕಾಣೋ ಸಮಯದಲ್ಲೇ ಶಂಕುಹುಳುಗಳ ಕಾಟ ಮತ್ತಷ್ಟು ನಷ್ಟ ಅನುಭವಿಸುವಂತೆ ಮಾಡಿದೆ. ಗ್ರಾಮಸ್ಥರೆಲ್ರೂ ದಿನಬೆಳಗಾದ್ರೆ ಸಾಕು ಈ ಹುಳುಗಳನ್ನ ತೆಗೆದುಹಾಕುವುದೇ ಸವಾಲಾಗಿದೆ. ಸಂಬಂಧಪಟ್ಟ ಕೃಷಿ ಅಧಿಕಾರಿಗಳು ಸಮಸ್ಯೆಯನ್ನ ಬಗೆಹರಿಸಬೇಕು ಅಂತ ಆಗ್ರಹಿಸುತ್ತಿದ್ದಾರೆ.
ಒಂದು ಸಾರಿ ಮೊಟ್ಟೆ ಇಟ್ರೆ ಬರೊಬ್ಬರಿ 50-60 ಮೊಟ್ಟೆಗಳನ್ನು ಇಡೋ ಈ ಕ್ರಿಮಿ ಲಕ್ಷ್ಮೇಶ್ವರ ಸಮೀಪದ ಯತ್ತಿನಹಳ್ಳಿ ಗ್ರಾಮದಲ್ಲಿ ಮತ್ತಷ್ಟು ತನ್ನ ಸಂತತಿಯನ್ನ ಹೆಚ್ಚಿಸಿಕೊಂಡಿದೆ. ನೆಮ್ಮದಿಯಿಂದ ಇದ್ದ ಗ್ರಾಮದಲ್ಲಿ ರಕ್ಷಬೀಜಾಸುರರಂತೆ ಈ ಶಂಕಬೀಜಾಸುರರು ನೆಲೆಯೂರಿರೋದು ಗ್ರಾಮಸ್ಥರನ್ನು ಭಯ ಬೀಳುವಂತೆ ಮಾಡಿರೋದಂತು ಸುಳ್ಳಲ್ಲ.