ಮಂಗಳೂರು: ಬಂದರು ನಗರಿ ಮಂಗಳೂರಿನ ಶಕ್ತಿನಗರದ ಜನರಲ್ಲಿ ಎಂದಿಲ್ಲದ ಹರ್ಷ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಗ್ಯಾರೆಂಟಿ ಯೋಜನೆ ರಾಜ್ಯದ ಎಲ್ಲೆಡೆ ಮಹಿಳೆಯರ ಪಾಲಿಗೆ ಆಶಾಕಿರಣವಾದರೆ, ಖಾಸಗಿ ಬಸ್’ಗಳ ಪ್ರಾಬಲ್ಯವಿರುವ ದಕ್ಷಿಣ ಕನ್ನಡದ ಬಹುತೇಕ ಊರುಗಳ ಮಹಿಳೆಯರಿಗೆ ನಿಲುಕದ ಕುಸುಮದಂತಿದೆ. ಇಂತಹಾ ಸ್ಥಿತಿಯನ್ನು ಮನಗಂಡ ಸಾಮಾಜಿಕ ಹೋರಾಟಗಾರರೂ ಆದ ಮಂಗಳೂರಿನ ಹಿರಿಯ ವಕೀಲ ಮನೋರಾಜ್ ರಾಜೀವ್ ಅವರ ಕಾಳಜಿಯಿಂದ ಮಂಗಳೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸರ್ಕಾರಿ ಬಸ್ ಸಂಚರಿಸುವಂತಾಗಿದೆ.
ಮಂಗಳೂರಿನ ಶಕ್ತಿನಗರ ಅನನ್ಯ ಸಂಭ್ರಮಕ್ಕೆ ಸಾಕ್ಷಿಯಾಯಿತು. ಶಕ್ತಿನಗರ ಪದವು ವಾರ್ಡ್ ಸುತ್ತಮುತ್ತಲ ಜನರು ತಮ್ಮೂರಿಗೆ ಸರ್ಕಾರಿ ಬಸ್ ಬರಬೇಕು, ಶಕ್ತಿ ಯೋಜನೆಯ ಅನುಕೂಲ ತಮಗೂ ಸಿಗಬೇಕೆಂದು ಬಹುಕಾಲದಿಂದ ಒತ್ತಾಯಿಸುತ್ತಲೇ ಇದ್ದರು. ಜನಪ್ರತಿನಿಧಿಗಳು ಸ್ಪಂಧಿಸದಿದ್ದಾಗ ಮಾಜಿ ಸರ್ಕಾರಿ ವಕೀಲರೂ ಆದ ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ಘಟಕದ ಅಧ್ಯಕ್ಷರಾದ ಮನೋರಾಜ್ ರಾಜೀವ ಅವರು ಮಾಡಿದ ಕೆಲಸ ಎಂಪಿ-ಎಮ್ಮೆಲ್ಲೆಗಳನ್ನೂ ನಾಚಿಸುವಂತಿದೆ. ಶಕ್ತಿನಗರಕ್ಕೆ ಬಸ್ ಬಾರಿಸಬೇಕೆಂಬ ಈ ವಕೀಲರ ಭಗೀರಥ ಪ್ರಯತ್ನಕ್ಕೆ ಸ್ಥಳೀಯ ಜನರು ಅಭಿನಂಧಿಸಿದ್ದಾರೆ.
ಶಕ್ತಿ ನಗರ ಸಮೀಪದ ಬಡಾವಣೆಗಳಿಗೆ ಕೆಎಸ್ಸಾರ್ಟಿಸಿ ಬಸ್ ಆರಂಭಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಲೇ ಇದ್ದರು. ಆದರೆ ಸಾರಿಗೆ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂಧಿಸಲಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳ ಆಲಸ್ಯದಿಂದಾಗಿ ಸಾರಿಗೆ ನಿಗಮದ ಅಧಿಕಾರಿಗಳೂ ಅಸಹಾಯಕರಾಗಿದ್ದರು. ಆ ಸಂದರ್ಭದಲ್ಲಿ ಹಠಕ್ಕೆ ಬಿದ್ದ ವಕೀಲ ಮನೋರಾಜ್ ಅವರು ಜಿಲ್ಲಾಡಳಿತಕ್ಕೆ ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿದರಲ್ಲದೆ, ಜನಪ್ರತಿನಿಧಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಸ್ ಬರಿಸಲೇಬೇಕೆಂದು ಹಠಕ್ಕೆ ಬಿದ್ದರು. ಇದನ್ನು ಅರಿತ ಶಾಸಕರಾದ ಐವಾನ್ ಡಿಸೋಜಾ, ಮಂಜುನಾಥ್ ಭಂಡಾರಿ ಕೂಡಾ ವಕೀಲರ ಕ್ರಮಕ್ಕೆ ಸಾಥ್ ನೀಡಿದರು. ಈ ಭಗೀರಥ ಪ್ರಯತ್ನದ ಫಲವಾಗಿ ಡಿಸೆಂಬರ್ 6ರಂದು ಕರ್ನಾಟಕ ಸಾರಿಗೆ ಬಸ್ ಸಂಚಾರ ಆರಂಭಿಸಿದೆ. ಅಷ್ಟೇ ಅಲ್ಲ, ಈ ಹಿಂದೆ ರದ್ದಾಗಿದ್ದ ಅದೇ ರೂಟ್’ನ ಹಳೆಯ ಬಸ್ ಪರ್ಮಿಟ್’ಗೂ ಜೀವ ಬಂದಿರುವುದು ವಿಶೇಷ.
ಹೊಸ ರೂಟ್’ಗೆ ಬಸ್ ಸಂಚಾರ ಆರಂಭ ಹಿನ್ನೆಲೆ ಶಕ್ತಿನಗರದಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ. ಎಲ್ಲೆಲ್ಲೂ ಬ್ಯಾನರ್ ಬ್ಯಾಂಟಿಂಗ್ ರಾರಾಜಿಸುತ್ತಿತ್ತು. ಊರ ಜನರ ಉಪಸ್ಥಿತಿಯಲ್ಲಿ, ಶಾಸಕರಾದ ಐವಾನ್ ಡಿಸೋಜಾ, ಮಂಜುನಾಥ್ ಭಂಡಾರಿ ಮುಂದಾಳುತ್ವದಲ್ಲಿ ಬಸ್ ಯಾನಕ್ಕೆ ಚಾಲನೆ ನೀಡಲಾಯಿತು. ಐವಾನ್ ಡಿಸೋಜಾರವರು ತೆಂಗಿನಕಾಯಿ ಹೊಡೆದು ಪ್ರಾರ್ಥಿಸಿದ ಕೈಂಕರ್ಯವೂ ಗಮನಕೇಂದ್ರೀಕರಿಸಿತು.
ಪದವು ಗ್ರಾಮದ ಪ್ರೀತಿನಗರ, ಸಂಜಯನಗರ, ಮುಗೋಡಿ, ನೇಜಿಗುರಿ, ಮಂಜಡ್ಕ, ಬೊಲ್ಯ ಪರಿಸರದ ನಿವಾಸಿಗಳ ಬಹುದಿನದ ಬೇಡಿಕೆ ಈಡೇರಿದ ಹರ್ಷದಲ್ಲಿ ಊರ ಜನ ಮಿಂದೆದ್ದರು.
ಬಸ್ ಸಂಚಾರ ಆರಂಭ ಕುರಿತಂತೆ ಸಂತಸ ಹಂಚಿಕೊಂಡ ಹಿರಿಯ ವಕೀಲ ಮನೋರಾಜ್, ಊರ ಜನರ ಆಗ್ರಹಕ್ಕೆ ಸ್ಪಂಧಿಸಿದ ಐವನ್ ಡಿಸೋಜಾ, ಬಿ.ಕೆ. ಹರಿಪ್ರಸಾದ್, ಮಂಜುನಾಥ ಭಂಡಾರಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ, ಜಿಲ್ಲಾ ಸದಸ್ಯ ಅಲೆಸ್ಟನ್ ಡಿಕುನ್ಹಾ, ಶಾಂತಲಾ ಗಟ್ಟಿ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.