ಉಡುಪಿ: ಕೊಸೋನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಜಿಲ್ಲೆಯಲ್ಲಿ ಶಾಲಾರಂಭಕ್ಕೆ ತಾವು ಸಿದ್ದ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸುನಿಲ್ ಕುಮಾರ್ ಪಾಸಿಟಿವಿಟಿ ರೇಟ್ ಹೆಚ್ಚಿದ ಕಾರಣಕ್ಕೆ ತರಗತಿಗಳು ಆರಂಭವಾಗಿರಲಿಲ್ಲ. ಆದರೆ ಇದೀಗ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಕಳೆದ ಮೂರು ದಿನಗಳಲ್ಲಿ ಪಾಸಿಟಿವಿಟಿ ರೇಟ್ ಶೇ. 1.4 ಇದೆ. ಈ ಹಿನ್ನೆಲೆಯಲ್ಲಿ ಶಾಲಾರಂಭ ಮಾಡುತ್ತೇವೆ ಎಂದ ಸಚಿವರು, 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಶಾಲಾರಂಭ ಮಾಡಲು ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ. ಅದರಂತೆ, ಸೆಪ್ಟಂಬರ್ 1ರಿಂದ ತರಗತಿಗಳು ಆರಂಭವಾಗಲಿದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ಎಚ್ಚರಿಕೆಯಿಂದ ಗಮನಿಸಬೇಕು. ಶಿಕ್ಷಕರಿಗೆ ಲಸಿಕೆ ಕಡ್ಡಾಯ ಎಂದು ನೆನಪಿಸಿದ ಅವರು, ಕೋವಿಡ್ ನಿಯಮಾವಳಿ ಅರ್ಥೈಸಿಕೊಂಡು ತರಗತಿ ಆರಂಭಿಸಿ ಎಂದು ಸಲಹೆ ಮಾಡಿದರು.