ಬೆಂಗಳೂರು: ಫೆಬ್ರವರಿ 22 ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಪೂರ್ಣ ಪ್ರಮಾಣದ ಶಾಲೆ ತೆರೆಯುವ ಸಂಬಂಧ ಆರೋಗ್ಯ, ಶಿಕ್ಷಣ ಇಲಾಖೆಗಳ ಜೊತೆ ಸಭೆ ನಡೆಸಿದ್ದು, ಜುಲೈ 15 ರಿಂದ 2021-22 ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದರು.
ರಾಜ್ಯದ ಹಲವು ಭಾಗಗಳಲ್ಲಿ ಈ ತಿಂಗಳ 22 ರಿಂದ 6 ರಿಂದ 8ನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗಗಳಲ್ಲಿ 6 ಮತ್ತು 7ನೇ ತರಗತಿಗಳನ್ನು ಆರಂಭಿಸುತ್ತಿಲ್ಲ. 8ನೇ ತರಗತಿಗಳು ಮಾತ್ರ ಪ್ರಾರಂಭವಾಗಲಿವೆ ಎಂದರು. ಬೆಂಗಳೂರು ಮತ್ತು ಕೇರಳ ಗಡಿ ಭಾಗದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಇರುವ ಕುರಿತು ಅವಲೋಕನ ನಡೆಯುತ್ತಿದ್ದು, ಈ ತಿಂಗಳ 24 ಹಾಗೂ 25ರಂದು ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. 1 ರಿಂದ 5ನೇ ತರಗತಿಗಳನ್ನು ಆರಂಭಿಸುವ ಬಗ್ಗೆಯೂ ಇದೇ ಸಂದರ್ಭದಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಹಲವು ರಾಜ್ಯಗಳಲ್ಲಿ ಈಗಾಗಲೇ ಶಾಲೆಗಳನ್ನು ಆರಂಭಿಸಿದ್ದು, ರಾಜ್ಯದಲ್ಲೂ ಭೌತಿಕ ತರಗತಿಗಳನ್ನು ನಡೆಸಲು ಆದ್ಯತೆ ನೀಡಲಾಗುತ್ತಿದೆ ಎಂದರು.