ಮಂಗಳೂರು: ಬಂದರುನಗರಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ನಾಯಕರ ನಡೆ ಬಗ್ಗೆ ಮುನಿಸಿಕೊಂಡಿರುವ ಕರಾವಳಿ ಬಿಜೆಪಿಯ ಚಾಣಕ್ಯ ಎಂದೇ ಗರುತಾಗಿರುವ ಸತೀಶ್ ಪ್ರಭು ಕಮಲಪಾಳಯಕ್ಕೆ ಗುಡ್ ಬೈ ಹೇಳಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷ ಸೇರಿರುವ ಅವರು ಕಳೆದೆರಡು ದಿನಗಳಲ್ಲಿ ಕೈ ಅಭ್ಯರ್ಥಿ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಆರೆಸ್ಸೆಸ್‌ನ ಶಕ್ತಿಕೇಂದ್ರ ಮಂಗಳೂರಿನ ಸಂಘನಿಕೇತನದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿರುವ ಸತೀಶ್ ಪ್ರಭು, ಗೌಡ ಸಾರಸ್ವತ ಸಮುದಾಯದ ಪ್ರಭಾವಿ ನಾಯಕರೂ ಹೌದು. ಈ ಸಮುದಾಯದ ಪ್ರಮುಖ ಆರಾಧನಾ ಕ್ಷೇತ್ರ ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಾಲಯದ ಟ್ರಸ್ಟಿಯಾಗಿರುವ ಸತೀಶ್ ಪ್ರಭು, ಈ ಜವಾಬ್ಧಾರಿ ಮೂಲಕ ಬಿಜೆಪಿ ಹಾಗೂ ಆರೆಸ್ಸೆಸ್‌ಗೆ ಶಕ್ತಿಯಾಗಿದ್ದರು. ಇದೀಗ ಮತದಾನಕ್ಕೆ ಕ್ಷಣಗಣನೆ ನಡೆಯುತ್ತಿದ್ದಾಗಲೇ ಅವರು ಕಾಂಗ್ರೆಸ್ ಧ್ವಜ ಹಿಡಿದಿರುವುದು ಅಖಾಡಲ್ಲಿನ ಅಚ್ಚರಿ.
ಸತೀಶ್ ಪ್ರಭು ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಬೆಳವಣಿಗೆ ಬಗ್ಗೆ ಕರಾವಳಿಯ ಪ್ರಭಾವಿ ಸಮುದಾಯವಾಗಿರುವ ಗೌಡಸಾರಸ್ವತ ಬಳಗದಲ್ಲೂ ಭಾರೀ ಚರ್ಚೆ ನಡೆದಿದೆ. ಕಾರ್‌ಸ್ಟ್ರೀಟ್ ದೇವಾಲಯದ ಆಡಳಿತ ಮಂಡಳಿಯಲ್ಲಿ ಸತೀಶ್ ಪ್ರಭು ಅವರು ಪ್ರಮುಖ ಸ್ಥಾನ ಹೊಂದಿರುವ ಹಿನ್ನೆಲೆಯಲ್ಲಿ ಸಮುದಾಯ ಮಟ್ಟದಲ್ಲೂ ಬದಲಾವಣೆ ನಡೆದಿದೆ ಎಂಬ ಚರ್ಚೆ ಸಾಗಿದೆ. ಆದರೆ ಈ ಕುರಿತ ಅಂತೆ-ಕಂತೆಗಳ ಬಗ್ಗೆ ಶ್ರೀ ವೆಂಕರಮಣ ದೇವಾಲಯದ ಪ್ರಮುಖರು ಸ್ಪಷ್ಟನೆ ನೀಡಿದ್ದಾರೆ.
ಚಿತ್ರಗಳು: ಮಂಜು ನೀರೇಶ್ವಾಲ್ಯ
ನಮ್ಮ ಜಿಯಸ್‌ಬಿ ಸಮಾಜದ ಪ್ರತಿಷ್ಠಿತ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸತೀಶ್ ಪ್ರಭು ಅವರೂ ಮೊಕ್ತೇಸರರಾಗಿದ್ದಾರೆ. ಇತ್ತೀಚಿಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರು ಒಂದು ಪಕ್ಷಕ್ಕೆ ಒಲವು ತೋರಿಸಿದ್ದು ಆ ಪಕ್ಷದೊಂದಿಗೆ ಕೈ ಜೋಡಿಸಿಕೊಂಡಿದ್ದಾರೆ. ಅದು ಅವರ ವೈಯುಕ್ತಿಕ ನಿರ್ಧಾರವಾಗಿದ್ದು, ದೇವಳಕ್ಕೂ ಅದಕ್ಕೂ ಏನೂ ಸಂಭಂದವಿರುವುದಿಲ್ಲ ಎಂದು ಪ್ರಮುಖರು ಸ್ಪಷ್ಟಪಡಿಸಿದ್ದಾರೆ.
ಕೆಲವರು ಶ್ರೀ ದೇವಳದ ಹೆಸರು ಉಲ್ಲೇಖಿಸಿ ಸುಳ್ಳು ಸಂಗತಿ ಹಬ್ಬಿಸುತ್ತಿದ್ದಾರೆ. ಶ್ರೀ ದೇವಳದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲವಿತ್ತುವುದಿಲ್ಲ. ಹೀಗಿರುವಾಗ ಶ್ರೀ ದೇವಳದ ಹೆಸರು ಕೆಡಿಸುವ ಪ್ರಯತ್ನ ಬೇಡ. ಯಾವುದೇ ಮೊಕ್ತೇಸರರ ವೈಯುಕ್ತಿಕ ವಿಚಾರದ ಬಗ್ಗೆ ಮಾತನಾಡುವಾಗ ಅಥವಾ ಬರೆಯುವಾಗ ದೇವಸ್ಥಾನದ ಹೆಸರನ್ನು ಉಲ್ಲೇಖಿಸಬಾರದು ಎಂದು ಪ್ರಮುಖರಲ್ಲೊಬ್ಬರಾದ ಗಣೇಶ್ ಕಾಮತ್ ಅವರು ಮನವಿ ಮಾಡಿದ್ದಾರೆ.