ಬೆಂಗಳೂರು: ಡ್ರಗ್ಸ್ ಪೆಡ್ಲರ್‌ಗಳ ಹೆಡೆಮುರಿ ಕಟ್ಟಿ ದೇಶದ ಗಮನಸೆಳೆದಿದ್ದ ಉದ್ಯಾನನಗರಿಯ ಜೆ.ಸಿ.ನಗರ ಉಪವಿಭಾಗದ ಪೊಲೀಸರು ಇದೀಗ ಮತ್ತೊಂದು ಯಶೋಗಾಥೆ ಬರೆದಿದ್ದಾರೆ. ಬೆಂಗಳೂರು ಸಹಿತ ಕರುನಾಡು, ತಮಿಳುನಾಡು ಸಹಿತ ವಿವಿಧ ರಾಜ್ಯಗಳಲ್ಲಿ ಡಕಾಯಿತಿ ನಡೆಸುತ್ತಿದ್ದ ಕುಖ್ಯಾತ ಖದೀಮರನ್ನು ಸಿನಿಮೀಯ ರೀತಿ ಕಾರ್ಯಾಚರಣೆಯಲ್ಲಿ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಅದರಲ್ಲೂ ತುಳುನಾಡಿನ ಪೊಲೀಸ್ ವನಿತೆಯರು ತಮಿಳುನಾಡಿನಲ್ಲಿ ಕೈಗೊಂಡ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಯಾರು ಈ ತುಳುನಾಡಿನ ಭಲೇ ಚತುರೆಯರು? ಯಾರವರು ತಮಿಳುನಾಡಿನ ಖದೀಮರು?
ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಬಹುತೇಕ ಕೇಸ್‌ಗಳು ತಮಿಳುನಾಡು ಮೂಲದ ಆರೋಪಿಗಳದ್ದೇ. ಈ ಬಾರಿಯೂ ಬೆಂಗಳೂರಿನ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೂ ತಮಿಳುನಾಡಿನ ಖದೀಮರ ನಂಟಿನ ಬಗ್ಗೆ ವಾಸನೆ ಬಡಿದಿದೆ. ಈ ಬಗ್ಗೆ ಸುಳಿವರಿತಿದ್ದೇ ತಡ, ಸಂಜಯನಗರ ಠಾಣಾ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಆಳ್ವಾ ಅವರು ತಮ್ಮ ಉಪವಿಭಾಗದ ಅಧಿಕಾರಿ, ಎಸಿಪಿ ರೀಣಾ ಸುವರ್ಣ ಅವರ ಗಮನಸೆಳೆದರು. ಈ ಕಳ್ಳರ ಕರಾಮತ್ತಿಗೆ ಬ್ರೇಕ್ ಹಾಕಬೇಕಾದರೆ ಕಿಂಗ್‌ಪಿನ್‌ನ್ನೇ ಖೆಡ್ಡಕ್ಕೆ ಬೀಳಿಸವೇಕೆಂದು ಜಾಲ ಹೆಣೆದರು. ಇದಕ್ಕಾಗಿ ಈ ಇಬ್ಬರೂ ನಾರೀಮಣಿ ಪೊಲೀಸ್ ಅಧಿಕಾರಿಗಳೂ ಈ ದರೋಡ ಕೇಸ್‌ಗಳ ಸೂತ್ರಧಾರಿಗಳ ಅಡ್ಡೆ ಇದೆ ಎನ್ನಲಾದ ತಮಿಳುನಾಡಲ್ಲೇ ಖೆಡ್ಡಾ ತೋಡಿ ಖದೀಮರನ್ನು ಅವರ ಕಾರಸ್ಥಾನದಲ್ಲೇ ಬಂಧಿಸುವ ಮೂಲಕ ತಮಿಳುನಾಡು ಪೊಲೀಸರನ್ನೇ ನಿಬ್ಬೆರಗಾಗಿಸಿದ್ದಾರೆ.
ಸಂಜಯನಗರದ ಮನೆಯೊಂದಕ್ಕೆ ಮಾರ್ಚ್ 5ರಂದು ಲಗ್ಗೆ ಹಾಕಿದ್ದ ಕಳ್ಳರು, ಸುಮಾರು 2 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ್ದರು. ಈ ರೀತಿಯ ಹಲವು ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿದ್ದು, ತನಿಖೆಗೆ ಸವಾಲು ಎಂಬಂತಿದ್ದ ಕೇಸ್ ಬೇಧಿಸಲು ಎಸಿಪಿ ರೀನಾ ಸುವರ್ಣ ಹಾಗೂ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಆಳ್ವಾ ಕಸರತ್ತಿಗಿಳಿದರು. ಖದೀಮರ ಹೆಜ್ಜೆಜಾಡು ಬೆನ್ನತ್ತಿದ ಈ ಖಾಕಿ ವನಿತೆಯರ ನೇತೃತ್ವದ ಪೊಲೀಸರು ಮಣಿ @ ನಾಗಮಣಿ ಬಿನ್ ಸೋಲೆ (42 ವರ್ಷ), ಆರುಮುಗಂ ಬಿನ್ ಚಿನ್ನಸ್ವಾಮಿ (43 ವರ್ಷ), ಪಾಂಡಿಯನ್ ಬಿನ್ ರಾಮು, (53 ವರ್ಷ) ಎಂಬವರನ್ನು ಬಂಧಿಸಿದರು.
ಈ ಪೈಕಿ ಬೆಂಗಳೂರು ಮೂಲದ ಆರೋಪಿಗಳಿಗೆ, ತಮಿಳುನಾಡಿನ ಕುಖ್ಯಾತ ಪ್ರೊಫೆಷನಲ್ ಡಕಾಯಿತರ ನಂಟಿತ್ತು ಸಂಗತಿಯೂ ಬೆಳಕಿಗೆ ಬಂತು. ಐಶರಾಮಿ ಬಂಗಲೆಗಳಿಗೆ ಲಗ್ಗೆ ಹಾಕುವ ಸಂದರ್ಭದಲ್ಲಿ ಈ ಕಳ್ಳರು ತಮಿಳುನಾಡಿನ ಈ ಗ್ಯಾಂಗನ್ನು ಬೆಂಗಳೂರಿಗೆ ಕರೆಸಿಕೊಂಡು ಕೃತ್ಯಗಳನ್ನು ನಡೆಸುತ್ತಿದ್ದರು ಎಂಬ ವಿಚಾರ ಅನಾವರಣವಾಯಿತು. ಈ ಬಗ್ಗೆ ತನಿಖೆ ಕೈಗೊಂಡ ಎಸಿಪಿ ರೀನಾ ಸುವರ್ಣ ಹಾಗೂ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಆಳ್ವಾ ಸಾರಥ್ಯದ ಪೊಲೀಸ್ ತಂಡ ತಮಿಳುನಾಡಿನಲ್ಲಿ ಕಾರ್ಯಾಚರಣೆ ಕೈಗೊಂಡರು. ಪಿಎಸ್‌ಐ ಲೋಕೇಶ್ ಹಾಗೂ ಸಿಬ್ಬಂದಿ ತಾಂತ್ರಿಕ ನೆರವನ್ನೂ ನೀಡುವ ಮೂಲಕ ಇಡೀ ತಂಡವನ್ನೇ ಖೆಡ್ಡಕ್ಕೆ ಕೆಡವಿ ಬೆಂಗಳೂರಿನ ಜೈಲಿಗೆ ಅಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Sanjaynagar PS nabbed Tamilnadu HBT gang on whom 70 plus interstate cases were registered in different parts of Tamilnadu. In our city 7 cases. Worth of Rs 15.92 lakhs was recovered.@DCPNorthBCP @BlrCityPolice @CPBlr @BSBommai @sanjayanagarps pic.twitter.com/h9YGu60BYO
— ACP J C NAGAR (@acpjcnagar) April 12, 2021
ಬೆಂಗಳೂರಿನ ಸಂಜಯನಗರ, ವಿದ್ಯಾರಣ್ಯಪುರ, ಮಲ್ಲೇಶ್ವರಂ, ಕೊಡಿಗೇಹಳ್ಳಿ, ಸದಾಶಿವನಗರ ಮತ್ತು ಸೋಲದೇವನಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ, ಡಕಾಯಿತಿ ಸಹಿತ ಹಲವು ಕೃತ್ಯಗಳನ್ನು ನಡೆಸಿದ್ದಾರೆಂಬ ಸಂಗತಿಯನ್ನು ಹೊರಗೆಡವಿದ್ದಾರೆ. ಈ ಆರೋಪಿಗಳಿಂದ ಸುಮಾರು 15,92,000/-ರೂ ಮೌಲ್ಯದ 316 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಮತ್ತು 200 ಗ್ರಾಂ ಬೆಳ್ಳಿಯ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡು ಮತ್ತು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯಾರು ಈ ಮಣಿ?
ಎಸಿಪಿ ರೀನಾ ಸುವರ್ಣ ಹಾಗೂ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಆಳ್ವಾ ಅವರ ಖಾಕಿ ವ್ಯೂಹದಲ್ಲಿ ಸಿಲುಕಿ ಬಂಧನಕ್ಕೊಳಗಾಗಿರುವ ಆರೋಪಿಯಾದ ಮಣಿ @ ನಾಗಮಣಿ ಬಿನ್ ಸೋಲೆ ಒಬ್ಬ ಕುಖ್ಯಾತ ಅಂತರಾಜ್ಯ ಕಳ್ಳನೆಂದು ಗುರುತಾದವನು. ಈತನ ಮೇಲೆ ಚನ್ನೈ ಸಹಿತ ತಮಿಳುನಾಡಿನಲ್ಲೇ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ವಿವಿಧ ಠಾಣೆಗಳಲ್ಲಿ 65 ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ದ ದಾಖಲಾಗಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಪ್ರಕರಣವೊಂದರಲ್ಲಿ ಚೆನ್ನೈನ ಜೈಲುಸೇರಿದ್ದ ಈತ 2020ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ. ಅನಂತರವೂ ತನ್ನ ಕೃತ್ಯಗಳನ್ನು ಮುಂದುವರಿಸಿದ್ದ ಈತ ಇದೀಗ ಮತ್ತೆ ಕಂಬಿಯ ಹಿಂದೆ ಬಂಧಿತನಾಗಿದ್ದಾನೆ.
ಈ ಕುಖ್ಯಾತರನ್ನು ಬಂಧಿಸಿರುವ ಪೊಲೀಸರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಯ ಮಹಾಮಳೆಯಾಗುತ್ತಿದೆ.